ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮೋದಿಯಂತಹ ನಾಯಕ ದೇಶದ ಚುಕ್ಕಾಣಿ ಹಿಡಿಯಬೇಕಿದೆ'

Srinivasa Murthy VN
Updated On : 19 Sept 2013, 10:11 am

ಅರಸೀಕೆರೆ: ಯುಪಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ಲಕ್ಷಾಂತರ ಕೋಟಿ ಹಗರಣಗಳಿಂದ ಸಾಲದ ಸುಳಿಗೆ ಸಿಲುಕಿರುವ ಈ ದೇಶವನ್ನು ಪಾರು ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ಯಲು ನರೇಂದ್ರ ಮೋದಿಯಂತಹ ಧೀಮಂತ ನಾಯಕರು ದೇಶದ ಚುಕ್ಕಾಣಿ ಹಿಡಿಯುವ ಅಗತ್ಯವಿದೆ ಎಂದು ನರೇಂದ್ರ ಮೋದಿ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ಧರ್ಮಶಾಲೆಯಲ್ಲಿ ತಾಲೂಕು ನರೇಂದ್ರ ಮೋದಿ ಅಭಿಮಾನಿಗಳ ಸಂಘ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದಾಗಿನಿಂದ ದಶಕಗಳ ಕಾಲ ದೇಶವನ್ನಾಳಿದವರು ಹಾಗೂ ಅವರ ಕುಟುಂಬ ಸದಸ್ಯರು ಅಕ್ರಮವಾಗಿ ಸಂಗ್ರಹಿಸಿದ ಕಪ್ಪುಹಣವನ್ನು  ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿದ್ದು ಈ ಬಗ್ಗೆ ಲೋಕಸಭೆಯಲ್ಲಿ ಮಾಧ್ಯಮಗಳ ಮೂಲಕ ಚರ್ಚೆ ನಡೆಯುತ್ತಿದೆಯೇ ಹೊರತು ದೇಶ ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದರೂ, ಡಾಲರ್ ಎದುರು ರೂಪಾಯಿ ಬೆಲೆ ಅಪಮೌಲ್ಯವಾಗುತ್ತಿದ್ದರೂ  ಈ ಕಪ್ಪುಹಣವನ್ನು ವಾಪಾಸ್ ತರುವತ್ತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.
ಇಂತಹ ದೇಶ ವಿರೋಧಿಗಳಿಂದ ಭಾರತಮಾತೆಯನ್ನು ರಕ್ಷಿಸಬೇಕಾದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಪ್ರಧಾನಿಯಾದರೆ ಮಾತ್ರ ಈ  ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರಲು ಸಾಧ್ಯ. ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಲೇಬೇಕು. ಆಗ ಗಾಂಧಿ ಕುಟುಂಬದ ಹಗರಣಗಳು ಸಾಲು ಸಾಲಾಗಿ ಹೊರಬರಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
 ಬಿಜೆಪಿ ಮುಖಂಡ ಎನ್.ಡಿ.ಪ್ರಸಾದ್ ಮಾತನಾಡಿ ಯುಪಿಎ ಸರ್ಕಾರದ ಭ್ರಷ್ಟಾಚಾರ ದುರಾಡಳಿತದಿಂದ ನಲುಗಿ ಹೋಗಿದ್ದು ಇಂತಹ ಸನ್ನಿವೇಶದಲ್ಲಿ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಏಕೈಕ ಆಶಾಕಿರಣ ನರೇಂದ್ರ ಮೋದಿ ಬದಲಾವಣೆಯ ಹರಿಕಾರರಾಗಿ ಬಿಜೆಪಿಯ ನೇತೃತ್ವ ವಹಿಸಿ ರಾಷ್ಟ್ರ ರಕ್ಷಣೆಗೆ ಮುಂದಾಗಿದ್ದು ಅವರ ಕೈ ಬಲಪಡಿಸಲು ಕಾರ್ಯಕರ್ತರು, ಅಭಿಮಾನಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಯು.ಆರ್.ಅನಂತಮೂರ್ತಿಯಂತವರು ದೇಶಬಿಟ್ಟು ತೊಲಗಬೇಕು. ಅವರಿಗೆ ನೀಡಿರುವ ಜ್ಞಾನಪೀಠ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಬಿಜೆಪಿ ಹಿರಿಯ ಮುಖಂಡ ಕೆ.ಎನ್.ದುರ್ಗಪ್ಪಶೆಟ್ಟಿ ಸಮಾರಂಭ ಉದ್ಘಾಟಿಸಿದರು.
ಮಾಜಿ ಶಾಸಕ ಎಎಸ್.ಬಸವರಾಜ್, ನರೇಂದ್ರ ಮೋದಿ ಅಭಿಮಾನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ತಾಲೂಕು ಅಧ್ಯಕ್ಷ ಪ್ರಭಾಕರ್, ಜಾನೇಕೆರೆ ಹೇಮಂತ್, ಎಪಿಎಂಸಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್, ವಿಎಚ್‌ಪಿ ಮುಖಂಡ ಕಟ್ಟೇಹಳ್ಳಿ ನವೀನ್, ಸುಬ್ರಮಣಿ, ಶಿವನ್‌ರಾಜ್, ನವೀನ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ತಾಲೂಕು ಅಧ್ಯಕ್ಷ ರಮೇಶ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement