ರಸ್ತೆ ದುರಸ್ತಿಗೆ ಆಗ್ರಹ: ರೈತ ಸಂಘ ಸಾಥ್
ಕ.ಪ್ರ. ವಾರ್ತೆ ಅರಸೀಕೆರೆ ಸೆ. 19
ತಾಲೂಕಿನ ಕಣಕಟ್ಟೆ ಹೋಬಳಿ ಕೇಂದ್ರದ ಸಮೀಪವಿರುವ ಮಾಗೇನಹಳ್ಳಿ ಗ್ರಾಮದ ರಸ್ತೆ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ರಸ್ತೆಗಳು ಟಾರು ಕಾಣದೆ ಕುಗ್ರಾಮಗಳಾಗೇ ಉಳಿದಿದ್ದರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ಗ್ರಾಮಸ್ಥರು ರಸ್ತೆತಡೆ ನಡೆಸಿದರು.
ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕಿನಾದ್ಯಂತ ರಸ್ತೆಗಳು ಅವ್ಯವಸ್ಥೆಯ ಕೆಸರುಗದ್ದೆಗಳಾಗಿ ಮಾಗೇನಹಳ್ಳಿ ರಸ್ತೆ ಹಲವು ವರ್ಷಗಳಿಂದ ದುರಸ್ತಿಯಾಗದೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಸೈಕಲ್, ಎತ್ತಿನಗಾಡಿ, ರೈತರ ಸಾಮಗ್ರಿ ಹೊತ್ತು ತರಲು ಭಾರಿ ವಾಹನಗಳು, ದ್ವಿಚಕ್ರ ವಾಹನ ಸವಾರರು, ವೃದ್ಧ ರೋಗಿಗಳು ಓಡಾಡಲು ಸಾಧ್ಯವಾಗದೆ ಶಪಿಸುವಂತಾಗಿದೆ.
ರಸ್ತೆ ಅವ್ಯವಸ್ಥೆಯ ಬಗ್ಗೆ ಸಂಬಂಧಿಸಿದ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಲತಾಯಿ ಧೋರಣೆ ಮಾಡಿದ್ದಾರೆಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ಸುಧಾರಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ 234ರ ಮಾರ್ಗವಾಗಿ ತೆರಳುವ ಎಲ್ಲಾ ವಾಹನಗಳನ್ನು ತಡೆದು ಚಳವಳಿ ನಡೆಸುವುದಾಗಿ ಎಚ್ಚರಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೆನಹಳ್ಳಿ ನಾಗರಾಜ್, ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ತಾ.ಸಂಚಾಲಕ ಮಾಗೇನಹಳ್ಳಿ ಮಲ್ಲಿಕಾರ್ಜುನ್, ತಾ.ಅಧ್ಯಕ್ಷ ಕೆ.ಎನ್. ಮಲ್ಲಿಕಾರ್ಜುನ್, ಉಪಾಧ್ಯಕ್ಷ ಶಿವಲಿಂಗಪ್ಪ, ಶಿವಮೂರ್ತಿ, ಜವನಹಳ್ಳಿ ನಿಂಗಪ್ಪ, ಪ್ರಸಾದ್, ಪಿ.ಪಾಲಾಕ್ಷಮೂರ್ತಿ, ಎಂ.ಎಸ್.ಪರಮೇಶ್ವರಪ್ಪ, ಜಗದೀಶ್, ತಾಲೂಕು ಹಸಿರುಸೇನೆ ಅಧ್ಯಕ್ಷ ಎಂ.ಶಿವಕುಮಾರಸ್ವಾಮಿ ಗುರುಬಸಪ್ಪ, ಬಸವರಾಜ್ ನೇತೃತ್ವ ವಹಿಸಿದ್ದರು.