ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶುದ್ಧ ಹಾಲಿಗೆ ಉಪ್ಪಿನ ನೀರು ಬೆರೆಸಿ ವಂಚನೆ

Srinivasa Murthy VN
Updated On : 19 Sept 2013, 10:10 am

ಕ.ಪ್ರ.ವಾರ್ತೆ ಹಾಸನ ಸೆ.19
ಪರಿಶುದ್ಧ ಹಾಲಿಗೆ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಕಲಬೆರಕೆ ಮಾಡಿ ಹಾಲು ಉತ್ಪಾದಕರನ್ನು  ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ರಾತ್ರಿಯಿಡಿ ಅವರನ್ನು ಕೂಡಿ ಹಾಕಿದ ಘಟನೆ ತಾಲೂಕಿನ ವೀರಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹಾಸನದ ಗವೇಹನಹಳ್ಳಿಯ ನಾಗಣ್ಣ ಮತ್ತು ದಿಲೀಪ್ ಎಂಬುವರು ಹಾಲನ್ನು ಕಲಬೆರಕೆ ಮಾಡಿ ರೈತರು ಹಾಗೂ ಹಾಲು ಒಕ್ಕೂಟಕ್ಕೆ ವಂಚಿಸುತ್ತಿದ್ದರು. ಇವರಿಬ್ಬರನ್ನು ಗ್ರಾಮಸ್ಥರು ಹಿಡಿದು ಹಾಸನ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ವೀರಾಪುರ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಸುಮಾರು ಏಳೆಂಟು ಸಂಘಗಳಿಂದ ಪ್ರತಿನಿತ್ಯ ನಾಗಣ್ಣ ನೂರಾರು ಲೀಟರ್ ಹಾಲನ್ನು ಒಕ್ಕೂಟಕ್ಕೆ ಸಾಗಿಸುತ್ತಿದ್ದರು. ಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ಕ್ಯಾಂಟರ್ ಮೂಲಕ ಹಾಲು ಸಾಗಾಣಿಕೆ ಮಾಡುತ್ತಿದ್ದ ಅವರು, ಪ್ರತಿ ಸಂಘದಿಂದ ದಿನಕ್ಕೆ 30ರಿಂದ 40 ಕ್ಯಾನ್‌ನಷ್ಟು ಹಾಲನ್ನು ಸಾಗಿಸುತ್ತಿದ್ದರು. ಬೆಳಗ್ಗೆ 15 ಹಾಗೂ ಸಂಜೆ 15 ಕ್ಯಾನ್‌ನಷ್ಟು ಹಾಲನ್ನು ಹಾಸನ ಹಾಲು ಒಕ್ಕೂಟಕ್ಕೆ ಸಾಗಿಸುತ್ತಿದ್ದರು.
ಎಂದಿನಂತೆ ಹಾಲನ್ನು ತೆಗೆದುಕೊಂಡು ಹೋಗಲು ನಾಗಣ್ಣ ವೀರಾಪುರ ಹಾಲು ಒಕ್ಕೂಟಕ್ಕೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಲಾರಿಯೊಳಗೆ ನೋಡಿದಾಗ ಆತ ಸುಮಾರು ಮುಕ್ಕಾಲು ಭಾಗ ತುಂಬಿದ್ದ ಕ್ಯಾನ್‌ಗಳಲ್ಲಿ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಇಟ್ಟಿದ್ದು ಪತ್ತೆಯಾಗಿದೆ. ಜೊತೆಗೆ ಲಾರಿಯಲ್ಲಿ ಪಂಚಿಂಗ್ ಯಂತ್ರವನ್ನು ಇಟ್ಟಿರುವುದನ್ನು ಕಂಡು ಗ್ರಾಮಸ್ಥರು ಇವೆಲ್ಲ ಏನೆಂದು ಪ್ರಶ್ನಿಸಿದ್ದಾರೆ.
ಮಾರ್ಗ ಮಧ್ಯೆ ಹಾಲು ಕಳವು:  ವೀರಾಪುರ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಇತರೆ ಗ್ರಾಮಗಳಿಂದ ಪ್ರತಿ ದಿನ ನೂರಾರು ಲೀಟರ್ ಹಾಲನ್ನು ಒಕ್ಕೂಟಕ್ಕೆ ಸಾಗಿಸುತ್ತಿದ್ದ ಈ ಆರೋಪಿಗಳು, ತುಂಬಿದ ಹಾಲಿನ ಕ್ಯಾನ್‌ಗಳನ್ನು ಮಾರ್ಗಮಧ್ಯೆ ತೆಗೆದು ಶುದ್ಧ ಹಾಲನ್ನು ಕಳವು ಮಾಡುತ್ತಿದ್ದರು. ನಂತರ ಕ್ಯಾನ್‌ನಲ್ಲಿ ಕಡಿಮೆಯಾದ ಹಾಲಿಗೆ ಬದಲಾಗಿ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಬೆರೆಸಿ 30 ಡಿಗ್ರಿಯಷ್ಟು ಗುಣಮಟ್ಟ ಬರುವಂತೆ ಕಾಯ್ದುಕೊಂಡು, ಮತ್ತೆ ಕ್ಯಾನ್‌ಗಳನ್ನು ಸೀಲ್ ಮಾಡುತ್ತಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರತಿ ಲೀಟರ್‌ಗೆ 21 ರು. ಬದಲು 18 ರು:  ಸಹಕಾರ ಸಂಘಗಳಿಗೆ ನೀಡಿದಂತಹ ಪಂಚಿಂಗ್ ಯಂತ್ರವನ್ನು ಅಕ್ರಮವಾಗಿ ಲಾರಿಯಲ್ಲಿ ಇವರು ಇಟ್ಟುಕೊಂಡಿದ್ದರು. ಈ ಇಬ್ಬರು ಆರೋಪಿಗಳು ಬಹಳ ದಿನಗಳಿಂದ ಹಾಲನ್ನು ಉಪ್ಪು ಮತ್ತು ಸಕ್ಕರೆ ಮಿಶ್ರತ ನೀರನ್ನು ಕಲಬೆರಕೆ ಮಾಡುತ್ತಿದ್ದರಿಂದ ಹಾಲಿನ ಗುಣಮಟ್ಟ ಕಡಿಮೆಯಾಗುತ್ತಿದ್ದರಿಂದ ಹಾಸನ ಹಾಲು ಒಕ್ಕೂಟದವರು ಪ್ರತಿ ಲೀಟರ್‌ಗೆ 21 ರು. ನೀಡುವ ಬದಲು 18 ರು.ಗಳನ್ನು ನೀಡುತ್ತಿದ್ದರು. ಇದರಿಂದ ಸಹಕಾರ ಸಂಘಕ್ಕೆ ನಷ್ಟ ಉಂಟಾಗುತ್ತಿತ್ತು.
ಈ ವರ್ಷ 1.80 ಲಕ್ಷ ರು. ಸಹಕಾರ ಸಂಘಕ್ಕೆ ಲಾಭ ಬಂದಿತ್ತು. ಆದರೆ ಈ ಆರೋಪಿಗಳು ಕಲಬೆರಕೆ ಹಾಲನ್ನು ನೀಡುತ್ತಿದ್ದರಿಂದ ಗುಣಮಟ್ಟ ಕಳಪೆಯಾದ ಪರಿಣಾಮ ಒಕ್ಕೂಟದಿಂದ ಕಡಿಮೆ ಬೆಲೆಗೆ ಇಳಿಸಿದ್ದರಿಂದ ಕೇವಲ 1.80 ಲಕ್ಷ ರು. ಇದ್ದ ಲಾಭ ಕೇವಲ 5 ಸಾವಿರ ರು.ಗಳಾಗಿದೆ. ಇದರಿಂದ ಗ್ರಾಮಸ್ಥರು ಅನುಮಾನಗೊಂಡು ಬುಧವಾರ ರಾತ್ರಿ ವ್ಯಾನ್ ತಡೆದು ಪರಿಶೀಲಿಸಿದಾಗ ಹಾಲಿಗೆ ಕಲಬೆರಕೆ ಮಾಡುತ್ತಿದ್ದ ಸಂಗತಿ ಬಯಲಾಯಿತು.
ನಾಗಣ್ಣ ಹಲವು ತಿಂಗಳಿನಿದ ಇದೇ ರೀತಿಯಾಗಿ ಹಾಲನ್ನು ಕಲಬೆರಕೆ ಮಾಡಿ ಶುದ್ಧವಾದ ಹಾಲನ್ನು ಖಾಸಗಿಯಲ್ಲಿ ಮಾರಾಟ ಮಾಡಿ ಹಣ ಲಪಟಾಯಿಸುತ್ತಿದ್ದ. ಈತನ ವಂಚನೆಯಿಂದಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಇದರಿಂದ ಆಕ್ರೋಶಗೊಂಡು ಗ್ರಾಮಸ್ಥರು ಮಾಲೀಕ ನಾಗಣ್ಣ ಮತ್ತು ದಿಲೀಪ್ ಇಬ್ಬರನ್ನು ಬುದವಾರ ರಾತ್ರಿಯಿಡಿ ಕೂಡಿ ಹಾಕಿದರು.
ವಿಚಾರ ತಿಳಿದ ಹಾಲು ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಗೋಪಾಲಯ್ಯ, ಉಪ ವ್ಯವಸ್ಥಾಪಕ ಜಯಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರಾತ್ರಿ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ಪೊಲೀಸರ ಮಧ್ಯ ಪ್ರವೇಶದಿಂದ ತಿಳಿಯಾಗಿದೆ. ರಾತ್ರಿಯಿಡೀ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜೈನಹಳ್ಳಿ ರಶ್ಮಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ವೀರೇಂದ್ರ ಪ್ರಸಾದ್ ಭೇಟಿ ನೀಡಿದ್ದರು.

ನಾಗಣ್ಣ ಎಂಬುವರು ಅನುಮಾನ ಬಾರದಂತೆ ಮಾರ್ಗ ಸಂಖ್ಯೆ 16 ರಲ್ಲಿ ಪ್ರತಿನಿತ್ಯ ಹಾಲನ್ನು ಒಕ್ಕೂಟಕ್ಕೆ ನೀಡುತ್ತಿದ್ದರು. ಆದರೆ, ಬುಧವಾರ ಸಂಜೆ ಗ್ರಾಮಸ್ಥರು ಅನುಮಾನಗೊಂಡು ಲಾರಿಯನ್ನು ಪರಿಶೀಲಿಸಿದಾಗ ಈ ಅಕ್ರಮ ಪತ್ತೆಯಾಯಿತು. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಈಗಾಗಲೇ ಪೊಲೀಸರಿಗೆ ಒಪ್ಪಿಸಲಾಗಿದೆ. ಒಕ್ಕೂಟದ ನಿಯಮ ಪ್ರಕಾರ ಪಂಚಿಂಗ್ ಯಂತ್ರ, ಟ್ಯಾಕ್‌ಗಳನ್ನು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಮಾತ್ರ ನೀಡಬೇಕು ಎಂದಿದೆ. ಆದರೆ ಇವರು ಲಾರಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡು ಕಲಬೆರಕೆ ಹಾಲನ್ನು ಮಾರುತ್ತಿದ್ದುದು ಗೋಚರವಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
-ಜಯಪ್ರಕಾಶ್, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ, ಹಾಸನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement