ಇಂದು, ನಾಳೆ ಚಿತ್ರಕಲಾ ಪ್ರದರ್ಶನ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಚಿತ್ರಕಲಾ ಶಿಕ್ಷಕರ ವರ್ಣಮಿಲನ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ವಿಚಾರ ಸಂಕಿರಣವನ್ನು ಸೆ. 21, 22 ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. 21 ರಂದು ಬೆಳಗ್ಗೆ 10ಕ್ಕೆ ಚಿತ್ರಕಲಾ ಪ್ರದರ್ಶನವನ್ನು ಡಿಡಿಪಿಐ ಜಿ.ಆರ್.ಬಸವರಾಜ್ ಉದ್ಘಾಟಿಸುವರು. ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಅವಟಿ ಅಧ್ಯಕ್ಷತೆ ವಹಿಸುವರು. ಇಳಕಲ್‌ನ ಸ್ನಾತಕೋತ್ತರ ಕೇಂದ್ರದ ಎಂಎಫ್‌ಎ ಡೀನ್ ಬಸವರಾಜ ಗವಿಮಠ ಕ್ಯಾಟಲಾಗ್ ಬಿಡುಗಡೆ ಮಾಡುವರು. ಜಿಲ್ಲಾ ಶಿಕ್ಷಣಾಧಿಕಾರಿ ಡಿ.ಟಿ.ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎ.ಜೆ.ಕೃಷ್ಣೇಗೌಡ ಅವರು ಚಿನ್ನಾರಿ ಚಿತ್ರ ಮತ್ತು ಬಣ್ಣ ಪುಸ್ತಕಗಳನ್ನು ಬಿಡಗಡೆ ಮಾಡುವರು. 22 ರಂದು ಬೆಳಗ್ಗೆ 10ಕ್ಕೆ ಕಲಾನುಭವ ಕುರಿತು ಸಂಪನ್ಮೂಲ ವ್ಯಕ್ತಿ ಉ.ರಾ.ನಾಗೇಶ್ ವಿಚಾರ ಮಂಡಿಸುವರು. ಕವಯತ್ರಿ ರೂಪಹಾಸನ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, ಲೇಖಕ ಮೇಟಿಕೆರೆ ಹಿರಿಯಣ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ಭಾಗವಹಿಸುವರು.
ಸೋಂಕು ಬಗ್ಗೆ ಎಚ್ಚರ ವಹಿಸಬೇಕು
ಹಾಸನ: ಆಸ್ಪತ್ರೆಯಿಂದಲೇ ಹರಡಬಹುದಾದ ಸೋಂಕುಗಳ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿ ಎಚ್ಚರ ವಹಿಸುವುದು ಸೂಕ್ತ ಎಂದು ಮಕ್ಕಳ ತಜ್ಞ ಡಾ. ದಿನೇಶ್ ಕಬ್ಳಿಗೆರೆ ತಿಳಿಸಿದರು. ರೋಟರಿ ಮಿಡ್‌ಟೌನ್ ನಗರದ ಮಣಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು, ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ್ದ ತೀವ್ರ ನಿಗಾ ಘಟಕ ಹಾಗೂ ಆಸ್ಪತ್ರೆಯ ಸೋಂಕುಗಳ ಬಗೆಗಿನ ಕಾರ್ಯಾಗಾರದಲ್ಲಿ ಶ್ರವಣ, ದೃಶ್ಯ ಮಾಧ್ಯಮದ ಮೂಲಕ ತರಬೇತಿ ನೀಡಿದರು. ತೀವ್ರ ನಿಗಾ ಘಟಕಗಳಲ್ಲಿ ಈ ಸೋಂಕಿನ ಬಗ್ಗೆ ಎಚ್ಚರ ವಹಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ಡಾ.ಸುಧೀರ್ ಬೆಂಗಳೂರು, ಡಾ.ಜೆ.ಕೆ. ಯತೀಶ್‌ಕುಮಾರ್, ಡಾ.ಬಿ.ಕೆ.ಸೌಮ್ಯಮಣಿ, ರೋಟರಿ ಮಿಡ್‌ಟೌನ್ ಅಧ್ಯಕ್ಷ ಆರ್. ಸತ್ಯನಾರಾಯಣ ಇತರರು ಇದ್ದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ಸಂದರ್ಶಿಸಲು ಹೋದ ಸಂದರ್ಭದಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಸೋಂಕು ಹರಡಬಹುದಾದ ಸಾಧ್ಯತೆ ಬಗ್ಗೆ ಚರ್ಚಿಸಲಾಯಿತು.