ಎಪಿಎಂಸಿ ಪೀಠೋಪಕರಣ ಜಪ್ತಿ
ಕ.ಪ್ರ.ವಾರ್ತೆ ಬೇಲೂರು ಸೆ.20
ನ್ಯಾಯಾಲಯ ಆದೇಶದಂತೆ ರೈತರಿಗೆ ಪರಿಹಾರ ನೀಡದ ಕಾರಣ ಎಪಿಎಂಸಿ ಪೀಠೋಪಕರಣಗಳನ್ನು ಜಫ್ತಿ ಮಾಡಿದ ಘಟನೆ ಗುರುವಾರ ನಡೆಯಿತು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಸಂದರ್ಭದಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ಅತಿ ಕಡಿಮೆ ಪರಿಹಾರ ನೀಡಲಾಗಿತ್ತು. ಈ ಸಂಬಂಧ ನ್ಯಾಯಾಲಯದಿಂದ ಅಡಿಗೆ 37 ರು. ನಂತೆ ಎಪಿಎಂಪಿ ರೈತರಿಗೆ ಪರಿಹಾರ ಹಣ ಪಾವತಿ ಮಾಡಬೇಕು ಎಂಬ ಆದೇಶವಿದ್ದರೂ, ಎಪಿಎಂಸಿ ಈವರೆಗೂ ಪಾವತಿ ಮಾಡದ ಹಿನ್ನೆಲೆಯಲ್ಲಿ ಜಫ್ತಿ ಸಂಬಂಧ ಎಪಿಎಂಸಿ ಕಚೇರಿಯ ಪೀಠೋಪಕರಣಗಳನ್ನು ಹೊರ ಹಾಕಲಾಯಿತು.
ಈ ಸಂದರ್ಭದಲ್ಲಿ ವಕೀಲ ಸೋಮೇಗೌಡ ಮಾತನಾಡಿ, 2003 ರಲ್ಲಿ ಸುಮಾರು 4 ಎಕರೆ ಪ್ರದೇಶವನ್ನು ತಾಲೂಕು ಎಪಿಎಂಸಿ ಸ್ವಾಧೀನ ಮಾಡಿಕೊಂಡ ಸಂದರ್ಭದಲ್ಲಿ ಅಂದು ಅಡಿಗೆ ಕೇವಲ 17 ರು. ನಂತೆ ಸ್ವಾಧೀನ ಮಾಡಿಕೊಳ್ಳಲಾಗಿತ್ತು.
ಆದರೆ ಈ ಜಮೀನಿನ ನಾಲ್ವರು ರೈತರು ನಮಗೆ ಇದನ್ನು ಬಿಟ್ಟು ಬೇರೆ ಜಮೀನು ಇಲ್ಲದ ಕಾರಣ ಹೆಚ್ಚಿಗೆ ಹಣ ನೀಡಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ರೈತರ ಜಮೀನಿಗೆ ಅಡಿಗೆ 37 ರು. ನಂತೆ ನಿಗದಿ ಮಾಡಿ 6-2 -13 ರಲ್ಲಿ ಆದೇಶ ನೀಡಿತ್ತು. ಈ ಸಂಬಂಧ ಎಪಿಎಂಸಿ ಅಧ್ಯಕ್ಷರಲ್ಲಿ ಮಾತನಾಡಿದ್ದರೂ ಇಲ್ಲಿಯವರೆಗೂ ಯಾವ ಕ್ರಮ ಕೈಗೊಳ್ಳದ ಕಾರಣ ಕೋರ್ಟ್ ಆದೇಶದಂತೆ ಜಪ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಈ.ಎಚ್.ಲಕ್ಷ್ಮಣ್ ಮಾತನಾಡಿ, ಎಪಿಎಂಸಿಯಲ್ಲಿ ರೈತರಿಗೆ ನೀಡಲು ಯಾವುದೇ ಹಣವಿಲ್ಲ. ಸದ್ಯ ಜಿಲ್ಲಾ ಕೇಂದ್ರದಿಂದ ಸಾಲ ತಂದು ಅಭಿವೃದ್ಧಿ ಮಾಡಲಾಗುತ್ತಿದೆ. ಈ ವಿಚಾರವಾಗಿ ಉನ್ನತ ಅಧಿಕಾರಿಗಳಲ್ಲಿ ಮಾತನಾಡಿ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ. ಏಕಾಏಕಿ ಜಫ್ತಿ ಮಾಡುತ್ತಿರುವುದು ಎಪಿಎಂಸಿ ಆಡಳಿತ ಮಂಡಳಿಗೆ ಬೇಸರ ತಂದಿದೆ ಎಂತಲೂ ಹೇಳಿದರು.