ನಗರದಲ್ಲಿ ಸಂಭ್ರಮದ ಓಣಂ
ಕ.ಪ್ರ.ವಾರ್ತೆ ಹಾಸನ ಸೆ.20
ನಗರದ ಹೌಸಿಂಗ್ ಬೋರ್ಡ್ ಬಳಿ ಇರುವ ಯವರ್‌ಗ್ರೀನ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸಂಸ್ಥೆ ನಿರ್ದೇಶಕ ಶಾಲಿನಿ ವರ್ಗೀಸ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಅಂಗಳದಲ್ಲಿ ಹೂವಿನ ರಂಗೋಲಿ ಬಿಡಿಸಿ ನೋಡುಗರ ಮನಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಆಯುರ್ವೇದ ತಜ್ಞ ಮತ್ತು ಸಮಾಜ ಸೇವಕ ಯೋಗೀಶ್ ಅವರು, ಓಣಂ ಹಬ್ಬ ಕೇರಳ ಮೂಲದಿಂದ ಬಂದಿದ್ದು, ಪ್ರಪಂಚದ ಯಾವ ಮೂಲೆಯಲ್ಲಿ ನೋಡಿದರೂ ಕೇರಳದವರು ಇದ್ದಾರೆ. ಅಲ್ಲೆಲ್ಲಾ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದರು.
ಕಟ್ಟಾಯ ಶಿವಕುಮಾರ್ ಮಾತನಾಡಿ, ನಾವು ಟಿವಿ ಮಾಧ್ಯಮದಲ್ಲಿ ಓಣಂ ಹಬ್ಬವನ್ನು ಕಾಣುತ್ತಿದ್ದೇವು. ಈಗ ನೇರವಾಗಿ ನೋಡುವಂತಹ ಸೌಭಾಗ್ಯವನ್ನು ನಮಗೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಕೃತಿ ಪ್ರಧಾನ ನೃತ್ಯವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಇದೆ ವೇಳೆ ಓಣಂ ಹಬ್ಬದ ವಿಶೇಷ ಸಿಹಿ ತಿಂಡಿಗಳು ಎಲ್ಲರ ಬಾಯಿಯಲ್ಲಿ ನೀರೂರಿಸಿತು. ಹೆಣ್ಣು ಮಕ್ಕಳು ಹೂವಿನಿಂದ ಬಿಡಿಸಿದ್ದ ಚಿತ್ರ ಪ್ರತಿಯೊಬ್ಬರ ಗಮನ ಸೆಳೆಯಿತು. ಪುರುಷೋತ್ತಮ್, ಹೇಮರಾಜ್, ಕಾಂತರಾಜ್, ಪ್ರೇಮಜ್ಯೋತಿ ಸಂಸ್ಥೆ ನಿರ್ದೇಶಕಿ ಶಾಲೀನಿ ವರ್ಗೀಸ್ ಇದ್ದರು. ಅಶ್ವಿನಿ ನಿರೂಪಿಸಿದರು. ಅನುಷಾ ಪ್ರಾರ್ಥಿಸಿದರು. ಶ್ರಾವ್ಯರಿಂದ ಭರತನಾಟ್ಯ ನಡೆಯಿತು.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಶುಕ್ರವಾರ 10,744 ಕ್ಯುಸೆಕ್ ನೀರು ಹರಿದು ಬಂದಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2921.60, ಜಲಾಶಯದಿಂದ ನದಿಗೆ 75 ಕ್ಯುಸೆಕ್ ನಾಲೆಗೆ 4300 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 36,716 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ಮಟ್ಟ 3164.890 ಅಡಿ, ಒಳ ಹರಿವು 500 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 400 ಕ್ಯುಸೆಕ್ ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ ಮಟ್ಟ 3167.32 ಅಡಿ, ಒಳ ಹರಿವು 230 ಕ್ಯುಸೆಕ್, ಹೊರ ಹರಿವು 25 ಕ್ಯುಸೆಕ್, ಒಟ್ಟು 1.392 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಆಲೂರು 2.2, ಅರಕಲಗೂಡು 0.1, ಬೇಲೂರು 1.8, ಹೊಳೆನರಸೀಪುರ 0.5,ಸಕಲೇಶಪುರ 14.6, ಹಾಸನ 1.6 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 2.2, ಕೆ.ಹೊಸಕೋಟೆ 7.9, ಕುಂದೂರು 4, ಅರಕಲಗೂಡು 0.1, ಮಲ್ಲಿಪಟ್ಟಣ 7, ಬೇಲೂರು 1.8, ಬಿಕ್ಕೋಡು 11.4, ಗೆಂಡೆಹಳ್ಳಿ 6.4, ಅರೇಹಳ್ಳಿ 4.2, ಚನ್ನರಾಯಪಟ್ಟಣ 0.2, ಹಾಸನ 1.6, ಕಟ್ಟಾಯ 2.1, ಸಾಲಗಾಮೆ 1.2, ಶಾಂತಿಗ್ರಾಮ 2.2, ಗೊರೂರು 2.8, ಹೊಳೆನರಸೀಪುರ 0.6, ಹಳೇಕೋಟೆ 1, ಸಕಲೇಶಪುರ 14.6, ,ಬಾಳುಪೇಟೆ 16.4, ,ಯಸಳೂರು 25, ಶುಕ್ರವಾರ ಸಂತೆ 33.1,ಮರೇನಹಳ್ಳಿ 88.3, ಹೊಸೂರು 11.4, ಬೆಳಗೊಡು 16.2, ಹಾನುಬಾಳು 15, ಹೆತ್ತೂರು 51.4 ಮಿ.ಮೀ ಮಳೆಯಾಗಿದೆ.
ಅನಂತಮೂರ್ತಿ ಹೇಳಿಕೆಗೆ ಖಂಡನೆ
ಹಾಸನ: ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬ ಸಾಹಿತಿ ಯು.ಅರ್. ಅನಂತಮೂರ್ತಿ ಹೇಳಿಕೆಯನ್ನು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂ.ಕೆ. ನಟರಾಜ್ ಖಂಡಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಈ ರೀತಿ ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಅನಂತಮೂರ್ತಿ ಅವರಿಂದ ಇಂಥ ಸಣ್ಣತನದ ಮಾತು ಬರುವುದು ಶೋಭೆಯಲ್ಲ. ಅಭಿವೃದ್ಧಿ ಹರಿಕಾರ ಎಂದು ಹೆಸರು ಪಡೆದಿರುವ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನವಿಲು ಮಾಸಿಕ ಬಿಡುಗಡೆ ನಾಳೆ
ಹಾಸನ: ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ, ಇತರೆ ಸಂಘಟನೆ ಆಶ್ರಯದಲ್ಲಿ ವಿ.ಆರ್.ಕಾರ್ಪೆಂಟರ್ ಸಂಪಾಕತ್ವದ ರಾಜ್ಯ ಮಟ್ಟದ ನವಿಲು ಮಾಸಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಗರದ ಸ್ವಾಭಿಮಾನಿ ಭವನದಲ್ಲಿ ಸೆ.22 ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ. ಪತ್ರಕರ್ತ ಮಂಜುನಾಥ ದತ್ತ ಪತ್ರಿಕೆ ಬಿಡುಗಡೆ ಮಾಡುವರು. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಸಾಹಿತಿ ಭಾನು ಮುಷ್ತಾಕ್, ನವಿಲು ಸಂಪಾದಕ ವಿ.ಆರ್. ಕಾರ್ಪೆಂಟರ್, ಸಮತಾ ಸೈನಿಕ ನಿಕ ದಳದ ಜಿಲ್ಲಾಧ್ಯಕ್ಷ ಆರ್‌ಪಿಐ ಸತೀಶ್, ಸಹಮತ ಫಿಲಂ ಸೊಸೈಟಿಯ ಐವಾನ್ ಡಿಸಿಲ್ವಾ ಪಾಲ್ಗೊಳ್ಳಲಿದ್ದಾರೆಂದು ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ತಿಳಿಸಿದ್ದಾರೆ.
ವಿಚಾರಣೆ: ಸರ್ಕಾರಿ ನೌಕರರ ಗಮನಕ್ಕೆ
ಹಾಸನ: ಸರ್ಕಾರಿ ನೌಕರರು ಇಲಾಖೆಗಳಿಗೆ ಸಂಬಂಧಪಟ್ಟಂತೆ ವಿಚಾರಣೆಗಳು ಇದ್ದಲ್ಲಿ ನಿವೃತ್ತ ನೌಕರ ಕೆ.ಕೃಷ್ಣಪ್ಪ, ನಿವೃತ್ತ ಶಿರಸ್ತೇದಾರ್, ನ್ಯಾಯಾಂಗ ಇಲಾಖೆ, ನಂ. 6, ಶ್ರೀರಂಗ ಲಕ್ಷ್ಮೀ ಕಲ್ಯಾಣ ಮಂಟಪದ ಎದುರು, ಬಿ.ಎಂ. ರಸ್ತೆ, ಹಾಸನ, (ಮೊ. 9741207503) ಸಂಪರ್ಕಿಸಲು ಕೋರಿದೆ.
ಮರಳು ಸಾಗಾಟ: 13 ವಾಹನ ವಶ
ಹಾಸನ: ಹಾಸನ ಉಪವಿಭಾಗಾಧಿಕಾರಿ ಶರತ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಹೊಳೆನರಸೀಪುರ ತಾಲೂಕಿನ ನಾನಾ ಕಡೆ ಪರಿಶೀಲನೆ ನಡೆಸಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 9 ಲಾರಿ, 4 ಟ್ರ್ಯಾಕ್ಟರ್ ಹಾಗೂ 16 ಬೋಟ್‌ಗಳನ್ನು ವಶಪಡಿಸಿಕೊಂಡಿದೆ.
ಹೊಳೆನಸೀಪುರ ತಾಲೂಕಿನ ಮೊಸಳೆಹೊಸಳ್ಳಿ, ಯಳ್ಳೇಶಪುರ, ಮೂಡಲಹಿಪ್ಪೆ, ಹಂಗರಹಳ್ಳಿ ಮತ್ತಿತರೆಡೆ ತಡ ರಾತ್ರಿವರೆಗೂ ತಪಾಸಣೆ ನಡೆಸಿದ ಉಪವಿಭಾಗಾಧಿಕಾರಿ ಶರತ್ ಹಾಗೂ ಹೊಳೆನರಸೀಪುರ ತಹಸೀಲ್ದಾರ್ ಮತ್ತು ಸಿಬ್ಬಂದಿ ಮರಳು ಸಾಗಾಣಿಕೆಗೆ ಪರವಾನಗಿ ಪಡೆಯದೆ ಮರಳು ತುಂಬಿಕೊಂಡು ಹೋಗುತ್ತಿದ್ದ 9 ಲಾರಿ, 4 ಟ್ರ್ಯಾಕ್ಟರ್‌ಗಳನ್ನು ವಾಹನ ಚಾಲಕರೊಂದಿಗೆ ಹೊಳೆನರಸೀಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶರತ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿರುವ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ತೂಬು, ಕೋಡಿ ದುರಸ್ತಿಗೆ ಸೂಚನೆ
ಹಾಸನ: ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಅಡಿಕೆ ಕಟ್ಟೆ ತೂಬು ಮತ್ತು ಕೋಡಿಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿಗಳು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಲೂಕಿನ ಬದನೆ ಕೆರೆಯ ತೂಬು ಮತ್ತು ಕೋಡಿ ದುರಸ್ತಿ, ಹೊಳಲು ಊರೊಳಗಿನ ಕಾಲೋನಿಯ ಹಳೇ ಪುರದ ಕೆರೆ ಏರಿ ಕಾಮಗಾರಿಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ತಿಳಿಸಿದ್ದಾರೆ. ಖಾತ್ರಿ ಯೋಜನೆಯಡಿ ಈ ಕಾಮಗಾರಿ ದುರಸ್ತಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.ಈ ಬಗ್ಗೆ ಸಮಾಜ ಸೇವಕ ಕೆ.ಎಸ್. ತೀರ್ಥಪ್ಪ ದೂರು ನೀಡಿದ್ದರ ಮೇರೆಗೆ ಈ ಕ್ರಮಕ್ಕೆ ಸೂಚಿಸಲಾಗಿದೆ.
ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ
ಹಾಸನ: ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ 23 ಶೀಘ್ರಲಿಪಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರಲಿಪಿಗಾರರ ಹುದ್ದೆಗೆ ವಿದ್ಯಾರ್ಹತೆ - ಎಸ್ಸೆಸ್ಸೆಲ್ಸಿ ಪಾಸು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಿರಿಯ ದರ್ಜೆ ಶೀಘ್ರಲಿಪಿಯಲ್ಲಿ ಉತ್ತೀರ್ಣತೆ ಹಾಗೂ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಿರಿಯ ದರ್ಜೆ ಶೀಘ್ರಲಿಪಿಯಲ್ಲಿ ಉತ್ತೀರ್ಣತೆ ಹಾಗೂ ಕನ್ನಡ ಇಂಗಿಷ್‌ನಲ್ಲಿ ಹಿರಿಯ ದರ್ಜೆ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.
ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯ ಅಥವಾ ್ತ ಇತರೆ ಜಿಲ್ಲೆಗಳ ಜಿಲ್ಲಾ ನ್ಯಾಯಾಧೀಶರ ಕಾರ್ಯಾಲಯದಲ್ಲಿ ಮಾಹಿತಿ ಪಡೆಯಬಹುದು.