ಪ್ರತಿಯೊಬ್ಬರು ರಕ್ತದ ಗುಂಪು ತಿಳಿಯುವುದು ಒಳ್ಳೆಯದು: ತಾ. ರೆಡ್ಕ್ರಾಸ್ ಅಧ್ಯಕ್ಷ ಮಧು
ಅರಸೀಕೆರೆ: ಆರೋಗ್ಯವಂತ ಸಮಾಜದ ಮೇಲೆ ದೇಶದ ಪ್ರಗತಿ ಅವಲಂಬಿತವಾಗಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕೆಂದು ತಾಲೂಕು ರೆಡ್ಕ್ರಾಸ್ ಅಧ್ಯಕ್ಷ ಎನ್.ಜಿ.ಮಧು ಹೇಳಿದರು.
ಪಟ್ಟಣದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ರೆಡ್ಕ್ರಾಸ್, ರೋಟರಿ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉಚಿತವಾಗಿ ರಕ್ತ ಗುಂಪು ಹಾಗೂ ದಂತ ಪರೀಕ್ಷೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಮಂದಿ ತಮ್ಮ ರಕ್ತದ ಗುಂಪು ಯಾವುದು ಎಂದು ತಿಳಿದುಕೊಂಡಿಲ್ಲ. ಹೀಗಾಗಿ ಅಪಘಾತ ಅಥವಾ ಇನ್ನಿತರೆ ತುರ್ತು ಸಂದರ್ಭದಲ್ಲಿ ಪರದಾಡಬೇಕಾಗುತ್ತದೆ.
ಹಾಗಾಗಿ ಪ್ರತಿಯೊಬ್ಬರು ತಮ್ಮ ರಕ್ತದ ಗುಂಪನ್ನು ಖಾತ್ರಿ ಪಡಿಸಿಕೊಂಡಲ್ಲಿ ತಮಗೆ ಅಥವಾ ತಮ್ಮ ಬಂಧುಮಿತ್ರರಿಗೆ ತುರ್ತು ಸಂದರ್ಭದಲ್ಲಿ ನೆರವಿಗೆ ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ರೋಟರಿ ಅಧ್ಯಕ್ಷ ಪ್ರವೀಣಕುಮಾರ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ದಂತ ಸಂಬಂಧಿ ಬಾಧೆಗಳಿಂದ ಬಹುತೇಕ ಮಂದಿ ನರಳುತ್ತಿದ್ದಾರೆ ಇದಕ್ಕೆ ಕಾರಣ ದಂತ ಪರೀಕ್ಷೆ ಮಾಡಿಸಿಕೊಳ್ಳಲು ಅವರಲ್ಲಿ ಉದಾಸೀನ ಮನೋಭಾವದ ಪರಿಣಾಮ ಈ ರೀತಿಯ ನೋವುಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ದಂತಪರೀಕ್ಷೆ ಒಳಗೊಂಡಂತೆ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಲಕಾಲದಲ್ಲಿ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡಾಗ ಮಾತ್ರ ನಿಮ್ಮ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು. 250ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಶಿಬಿರದ ಪ್ರಯೋಜನ ಪಡೆದುಕೊಂಡರು. ದಂತ ವೈದ್ಯ ಡಾ.ಜಗದೀಶ್ ದಂತ ಪರೀಕ್ಷಿಸಿದರು. ತಿಪಟೂರಿನ ಬಾಲಾಜಿ ಆಸ್ಪತ್ರೆಯ ಪ್ರಯೋಗ ತಜ್ಞೆ ರತ್ನ ರಕ್ತದ ಗುಂಪು ಪರೀಕ್ಷೆ ನಡೆಸಿದರು. ವಿಜ್ಞಾನ ಶಿಕ್ಷಕಿ ರೇಣುಕಾ ದೈಹಿಕ ಶಿಕ್ಷಕ ರಂಗಸ್ವಾಮಿ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.
ಅಂತರ ಕಾಲೇಜು ಕ್ರೀಡಾಕೂಟ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿವ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಅಂತರಕಾಲೇಜು ಕ್ರೀಡಾಕೂಟ ನಡೆಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್, ಕಬಡ್ಡಿ ಓಟದ ಸ್ಪರ್ಧೆ, ಲಾಂಗ್ಜಂಪ್ ಸೇರಿದಂತೆ ಇತರೆ ಕ್ರೀಡೆಗಳು ನಡೆಯಿತು. ಸ್ಪರ್ಧೆಯಲ್ಲಿ ಜಿಲ್ಲೆಯ 26 ಕಾಲೇಜಿನಿಂದ ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದಭಾಗವಹಿಸಿದ್ದರು.