ಬೇಲೂರು ಸರ್ಕಾರಿ ಆಸ್ಪತ್ರೆಗೆ ಡಿಸಿ ಭೇಟಿ
ಕನ್ನಡಪ್ರಭ ವಾರ್ತೆ ಬೇಲೂರು ಸೆ.20
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಭೇಟಿ ನೀಡಿ ಹೆಚ್ಚುವರಿ ಕಟ್ಟಡದ ಕಾಮಗಾರಿ ವೀಕ್ಷಿಸಿ ಗುಣಮಟ್ಟ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇಲೂರು ಸರ್ಕಾರಿ ಆಸ್ಪತ್ರೆ ಸದ್ಯ 100 ಹಾಸಿಗೆ ಉಳ್ಳ ಕೇಂದ್ರವಾದ ಕಾರಣ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಗುತ್ತಿಗೆದಾರರು ಕಟ್ಟಡ ನಿರ್ಮಾಣ ಸಮಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದ ಅವರು ಶೌಚಾಲಯ ನಿರ್ಮಾಣ ದಲ್ಲಿ ಜಾಗೃತೆ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ಗೋಪಾಲ್, ಡಾ.ಸಂಧ್ಯಾ, ಡಾ.ನರಸೇಗೌಡ ಇದ್ದರು.
ಆಲೂರು: ಅಪಹೃತ ಬಾಲಕ ಸಿನಿಮಿಯ ರೀತಿಯಲ್ಲಿ ಬಚಾವ್
ಕನ್ನಡಪ್ರಭ ವಾರ್ತೆ ಆಲೂರು ಸೆ. 20
ಪಟ್ಟಣದ ಅಬ್ದುಲ್ ಅನೀಫ್ ಎಂಬುವರ ಪುತ್ರ ಮಹಮ್ಮದ್ ಸೈಫ್ (12) ನನ್ನು ಅಪಹರಣ ಮಾಡಿದ್ದು, ಬಾಲಕ ಸಿನಿಮೀಯ ರೀತಿಯಲ್ಲಿ ಬಚಾವ್ ಆಗಿ ಬಂದ ಘಟನೆ ಶುಕ್ರವಾರ ನಡೆದಿದೆ.ಭೈರಾಪುರದ ಬೆಥೆಸ್ತಾ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಬೆಳಗಿನ ಜಾವ 6.30 ರಲ್ಲಿ ಹೋಂ ವರ್ಕ್ಗೆಂದು ಪೆನ್ಸಿಲ್ ತರಲು ಬಿ.ಎಂ.ರಸ್ತೆಯಲ್ಲಿ ಹೋಗುತ್ತಿದ್ದ. ಆಗ ಸಕಲೇಶಪುರ ಮಾರ್ಗದಿಂದ ಕೆಂಪು ಓಮ್ನಿಕಾರಿನಲ್ಲಿ ಬಂದ ನಾಲ್ವರು ಆತನ ಬಾಯಿ ಮುಚ್ಚಿ ಕಾರಿನಲ್ಲಿ ಅಪಹರಿಸಿ ಹಾಸನ ಬೈಪಾಸ್ ರಸ್ತೆಯಲ್ಲಿ ಹೋಗಿ, ಟೀ ಕುಡಿಯಲು ಕಾರನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಾಲಕ ಅವರಿಂದ ತಪ್ಪಿಸಿಕೊಂಡು ಜನರಿದ್ದ ಕಡೆಗೆ ಓಡಿದ ಕಾರಣ ಅಪಹರಣಕಾರರು ಅಲ್ಲಿಂದ ಕಾಲು ಕಿತ್ತಿದ್ದಾರೆ. ನಂತರ ಬಾಲಕ ಬೈಪಾಸ್ ಮೂಲಕ ಜವರಾಯಪಟ್ಟಣ ತನಕ ನಡೆದುಕೊಂಡು ಬಂದು, ನಂತರ ಟೆಂಪೋದಲ್ಲಿ ಆಲೂರಿಗೆ ಬಂದಿದ್ದಾನೆ. ವಿಷಯ ತಿಳಿದು ಗಾಬರಿಗೊಂಡ ಪೋಷಕರು ಸ್ಥಳೀಯರೊಡಗೂಡಿ ಅಪಹರಣಕಾರರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದು, ಈವರೆಗೂ ಅಪಹರಣಕಾರರ ಸುಳಿವು ಸಿಕ್ಕಿಲ್ಲ.