ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳಾ ಕಾರ್ಮಿಕರ ಬೃಹತ್ ಪ್ರತಿಭಟನೆ

Srinivasa Murthy VN
Updated On : 20 Sept 2013, 11:25 am

ಕ.ಪ್ರ.ವಾರ್ತೆ ಹಾಸನ ಸೆ. 20
ಕನಿಷ್ಠ ವೇತನ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಬೃಹತ್ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಎನ್.ಆರ್.  ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.        
ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ತೋಟ ಹಾಗೂ ಕಾಫಿ ಕ್ಯೂರಿಂಗ್ ಕಾರ್ಮಿಕರು, ಅಂಗನವಾಡಿ, ಗ್ರಾಮ ಪಂಚಾಯತಿ, ಅಕ್ಷರ ದಾಸೋಹ, ಹಾಸ್ಟೆಲ್, ವಸತಿಶಾಲೆ, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಕಾರ್ಖಾನೆ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹಾಗೂ ನೌಕರರುಗಳಿಗೆ ಕನಿಷ್ಠ ವೇತನ ಹಾಗೂ ಅಗತ್ಯ ಸೇವಾ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದಾರೆ.
ಹಮಾಲಿ ಕಾರ್ಮಿಕರು, ಆಟೋ ಚಾಲಕರು, ಬೀಡಿ ಕಾರ್ಮಿಕರು ಇತ್ಯಾದಿ ಕಾರ್ಮಿಕರು ಕನಿಷ್ಟ ಸಾಮಾಜಿಕ ಭದ್ರತೆಯೂ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕಾರ್ಮಿಕರು, ನೌಕರರನ್ನು ಗುತ್ತಿಗೆ ಹಾಗೂ ದಿನಗೂಲಿ ಆಧಾರದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಜೆಟ್‌ನಲ್ಲಿ ಯಾವುದೆ ಪ್ರಸ್ತಾಪವಿಲ್ಲ:     ದುಡಿಯುವ ಜನರ ಕನಿಷ್ಟ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಯಾವುದೆ ಪ್ರಸ್ತಾಪ ಮಾಡಿಲ್ಲ. ರಾಜ್ಯವ್ಯಾಪಿ ಸಮಾನ ಕನಿಷ್ಠ ವೇತನ, ಗುತ್ತಿಗೆ ಕಾರ್ಮಿಕರು, ಟ್ರೈನಿಗಳನ್ನು ಕಾಯಂಗೊಳಿಸಲು ಶಾಸನ ರೂಪಿಸುವ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಯೋಜನೆಗಳನ್ನು ರೂಪಿಸಿ ಫಲಾನುಭವಿಗಳನ್ನು ನೊಂದಾಯಿಸುವ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಆರೋಪಿಸಿದರು.
ಅಸಂಘಟಿತ ಕಾರ್ಮಿಕರ  ಸಾಮಾಜಿಕ ಭದ್ರತಾ ಮಂಡಳಿಗೆ ಬಿಡಿಗಾಸನ್ನು ನೀಡದೆ ಕೋಟ್ಯಂತರ ಅಸಂಘಟಿತ ಕಾರ್ಮಿಕರನ್ನು ವಂಚಿಸಿದೆ. ಮನೆ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ಆಟೋ ಟ್ಯಾಕ್ಸಿ ಚಾಲಕರು ಸೇರಿದಂತೆ ಅಸಂಘಟಿತರಿಗೆ ಲಭ್ಯವಿರುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ, ವಿಮಾ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಅವರನ್ನು ಫಲಾನುಭವಿಗಳನ್ನಾಗಿಸಲು ಪ್ರಯತ್ನವನ್ನೇ ಸರ್ಕಾರ ಮಾಡುತ್ತಿಲ್ಲ.  ಅಂಗನವಾಡಿ ಕೇಂದ್ರಗಳ ನಾನಾ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ, ಬಿಬಿಎಂಪಿ ಕಂಪ್ಯೂಟರ್ ಆಪರೇಟರ್‌ಗಳ ರೀತಿಯ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ನೀಡದೆ, ಪ್ರತಿ ಬಾರಿ ದುಡಿದ ವೇತನಕ್ಕಾಗಿ ಧರಣಿ-ಹೋರಾಟ ನಡೆಸಬೇಕಾದಂತಹ ಅನಿವಾರ್ಯತೆ ಸೃಷ್ಟಿಸಿದೆ. ಗುತ್ತಿಗೆ ರದ್ದುಪಡಿಸಿ ಹತ್ತಾರು ವರ್ಷಗಳು ದುಡಿದ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ ಎಂದು ಅಲವತ್ತುಕೊಂಡರು.
ಬೀಗಮುದ್ರೆ ತೆರೆವು, ಮಾಲೀಕರ ದಂಡಿಸಲು ಮೀನಮೇಷ: ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುವ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕಾದ ಕಾರ್ಮಿಕ ಇಲಾಖೆ ಅನಗತ್ಯ ವಿಳಂಬ ಮಾಡಿ, ಮಾಲೀಕರಿಗೆ ಅನುಕೂಲ ಮಾಡುತ್ತಿದೆ. ಫೆದರ್‌ಲೈಟ್, ಎಚ್‌ಎಂಜಿ, ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್, ವಿಪ್ರೋ ಟ್ರೈನಿಗಳು, 108 ನೌಕರರ ಮುಷ್ಕರ ನಿಷೇಧಿಸಲು ತುದಿಗಾಲಲ್ಲಿ ನಿಲ್ಲುವ ಇಲಾಖೆ, ಕಾರ್ಮಿಕರಿಗೆ ಅನುಕೂಲವಾಗುವಂತೆ ಬೀಗಮುದ್ರೆ, ತೆರೆವುಗೊಳಿಸಲು, ಮಾಲೀಕರನ್ನು ದಂಡಿಸಲು ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ.
ಈ ನೀತಿಗಳ ವಿರುದ್ಧದ ಹೋರಾಟ ಬಗ್ಗುಬಡಿಯಲು ಹಿಂದಿನ ಸರ್ಕಾರ 2009ರಲ್ಲಿ ರೂಪಿಸಿದ್ದ ನಿಯಾಮಾವಳಿ ಬಳಸಿ ಪರವಾನಗಿ ನೆಪಮಾಡಿ, ಪ್ರತಿಭಟನೆ, ಮೆರವಣಿಗೆ, ಹೋರಾಟಕ್ಕೆ ಅನುಮತಿಸದೆ, ಪೊಲೀಸ್ ಇಲಾಖೆ ಮೂಲಕ ಲಾಠಿ ಪ್ರಹಾರ, ದಸ್ತಗಿರಿ, ಸುಳ್ಳು ಮೊಕದ್ದಮೆ ಹೂಡುವ ಯತ್ನಗಳು ಹೆಚ್ಚುತ್ತಿವೆ. ಇದೀಗ 2004ರಲ್ಲಿ ಲ್ಯಾಪ್ಸ್ ಆಗಿರುವ ಹೋರಾಟ-ಮುಷ್ಕರಗಳನ್ನು ಬಗ್ಗುಬಡಿಯುವ ಇಎಸ್‌ಎಂಎ(ಎಸ್ಮ) ಕರಾಳ ಕಾಯ್ದೆಯನ್ನು ಮತ್ತೆ ಪುನರ್ ಅಂಗೀಕರಿಸುವುದಾಗಿ ಸಾರಿಗೆ ಸಚಿವರು ಪ್ರಕಟಿಸಿದ್ದಾರೆ.
ಬೆಲೆ ಏರಿಕೆ ನಿಯಂತ್ರಿಸದೆ, ಬಸ್, ಹಾಲು, ವಿದ್ಯುತ್, ಕುಡಿಯುವ ನೀರಿನ ದರಗಳ ಏರಿಸಲು ಹೊಂಚುಹಾಕಿ ಕುಳಿತಿದೆ. 1 ರು.ಗೆ ಅಕ್ಕಿ ನೀಡುವ ಯೋಜನೆ ಸ್ವಾಗತಾರ್ಹ. ಆದರೆ ಎಪಿಎಲ್ ಕುಟುಂಬಗಳಿಗೆ ಆಹಾರ ಧಾನ್ಯ ನೀಡದೆ, ಸಾರ್ವತ್ರಿಕ ಪಡಿತರ ವ್ಯವಸ್ಥೆ ನೀಡುವುದಿಲ್ಲ ಎಂಬುದನ್ನು ತೋರಿದೆ. ವಸತಿ ರಹಿತರಿಗೆ ವಸತಿ ನೀಡದೆ ಮನೆ ಬಾಡಿಗೆ ನಿಯಂತ್ರಣಕ್ಕೆ ಕ್ರಮವಹಿಸದೆ, ದುಡಿಯುವ ಜನತೆಯ ಹೊರೆ ಹೆಚ್ಚಿಸುತ್ತಿದೆ. ಈ ಎಲ್ಲಾ ಸರ್ಕಾರದ ನೀತಿಗಳ ಜೊತೆಯಲ್ಲಿ ಕೇಂದ್ರ ಸರ್ಕಾರವೂ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಕ್ರಮವಹಿಸದೆ, ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಪರಿಶೀಲನೆಗೆ ರಚಿಸಿದ್ದ ಕೇಂದ್ರ ಸಚಿವರ ಸಮಿತಿ ಕ್ರಮವಹಿಸದೆ ಕುಳಿತಿದೆ. ಅದರ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ಮತ್ತು ಡಿಸೆಂಬರ್‌ನಲ್ಲಿ ಸಂಸತ್ ಚಲೋ  ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ವಿ.ಸುಕುಮಾರ್, ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಖಜಾಂಚಿ ವೈ.ಆರ್.ಮಂಜಮ್ಮ, ಸಿಪಿಎಂ ಪೃಥ್ವಿ, ಅರವಿಂದ್, ಮಂಜುನಾಥ್, ನಾಗರಾಜು, ಶಾಂತಮ್ಮ, ಲಕ್ಷ್ಮಿ, ಗೌರಮ್ಮ, ಸರೋಜ, ಮಂಗಳ, ಸೌಮ್ಯ, ಸರಸ್ವತಿ, ರೂಪ, ಕುಮಾರಿ, ಶಾರದ, ಸುಮಂಗಲಿ, ರಾಧ, ಅನ್ನಪೂರ್ಣಮ್ಮ, ಅಂಬಿಕಾ, ಪೂರ್ಣಿಮಾ, ಮಂಗಳಮ್ಮ, ಪಲ್ಲವಿ, ಮಹಾಲಕ್ಷ್ಮಿ, ಸುಜಾತ, ಪರಿಮಳ, ಕಮಲ, ವೇದಾವತಿ, ಚಂಪಾರಾಣಿ, ಸುಹಾಸಿನಿ ಹಾಗೂ ಇತರರು ಇದ್ದರು.

ಬೇಡಿಕೆಗಳು
- ಸಾಮಾನ್ಯ ಕನಿಷ್ಠ ವೇತನ 10 ಸಾವಿರ ರು. ನಿಗದಿಗೆ ವೇತನ ಕಾಯ್ದೆ 1948 ಕ್ಕೆ ತಿದ್ದುಪಡಿ ತರಬೇಕು.
- ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ-ಸಮಾನ ವೇತನಕ್ಕಾಗಿ ಗುತ್ತಿಗೆ ಕಾರ್ಮಿಕರ ಕಾಯ್ದೆ 1970ಕ್ಕೆ ತಿದ್ದುಪಡಿ ತರಬೇಕು. ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಂಗೀಕರಿಸಿರುವ ರೀತಿಯಲ್ಲಿ ಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮತ್ತಿತರರನ್ನು ಕಾಯಂಗೊಳಿಸಲು ರಾಜ್ಯ ಶಾಸನ ಸಭೆಯು ಕೈಗಾರಿಕೆ ಸಂಸ್ಥೆಗಳ (ಕಾರ್ಮಿಕರಿಗೆ ಕಾಯಂ ಸ್ಥಾನ ನೀಡುವ) ಕಾಯ್ದೆಯನ್ನು ಅಂಗೀಕರಿಸಬೇಕು.
- ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಖಾತ್ರಿ ಪಿಂಚಣಿಗಾಗಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಫಲಾನುಭವಿಗಳಾದ ಆಟೋ-ಟ್ಯಾಕ್ಸಿ ಚಾಲಕರು, ದೋಬಿ, ದರ್ಜಿ, ಹಮಾಲಿ, ಮನೆ ಕೆಲಸಗಾರರು ಮತ್ತಿತರರ ನೊಂದಾವಣೆ ಯೋಜನೆಗಳ ಜಾರಿಗಾಗಿ ಅಗತ್ಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು.
- ಇಎಸ್‌ಎಂಎ(ಎಸ್ಮ) ಕಾಯ್ದೆ ಮರು ಜಾರಿಗೊಳಿಸಬಾರದು.
- ಹಾಸನ ಜಿಲ್ಲೆಯ ಗ್ರಾಮ ಪಂಚಾಯ್ತಿ, ಅಂಗನವಾಡಿ, ಮುನಿಸಿಪಾಲಿಟಿ, ಕಾಫಿ ಟೀ ತೋಟ, ಕಾಫಿ ಕ್ಯೂರಿಂಗ್, ಅಕ್ಷರ ದಾಸೋಹ, ಆಸ್ಪತ್ರೆ, ಹಾಸ್ಟೆಲ್, ವಸತಿ ಶಾಲೆ, ಕೈಗಾರಿಕೆ ಹಾಗೂ ಇನ್ನಿತರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಹಾಗೂ ನೌಕರರ ಸ್ಥಳೀಯ ಸಮಸ್ಯೆ ಪರಿಹರಿಸಬೇಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement