ಮೀನುಗಾರರ ಸಮಸ್ಯೆ ಪರಿಹಾರ
ಕ.ಪ್ರ.ವಾರ್ತೆ ಬೇಲೂರು ಸೆ.20
ಹಿಂದಿನ ಬಿಜೆಪಿ ಸರ್ಕಾರ ಮಹಾಮಂಡಳಿ ಜೊತೆ ಶಾಮೀಲಾಗಿ, ತಾವು ಹಿಡಿದ ಶೇ. 50 ರಷ್ಟು ಮೀನುಗಳನ್ನು ಸ್ಥಳೀಯ ಮೀನುಗಾರರಿಗೆ ನೀಡದೆ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮೀನುಗಾರಿಕೆ ಹಾಗೂ ಯುವಜನಸೇವಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಮೂಡಿಗೆರೆಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದಿನ ಬಿಜೆಪಿ ಸರ್ಕಾರ ಮಹಾಮಂಡಳಿಗೆ ಮುಂದಿನ ಐದು ವರ್ಷದವರೆಗೆ ಒಳ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ನಮ್ಮ ಕಾಂಗ್ರೆಸ್ ಸರ್ಕಾರ ನ್ಯಾಯಲಯದ ಮೊರೆ ಹೋಗಿದ್ದು, ಅತಿ ಬೇಗನೇ ಸ್ಥಳೀಯ ಮೀನುಗಾರರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು. ಮಹಾಮಂಡಳಿ ಸ್ಥಳೀಯರಿಗೆ ಮೀನು ಮಾರಾಟ ಮಾಡುವುದನ್ನು ಬಿಟ್ಟು ಮದ್ರಾಸ್ ಇನ್ನು ಆನೇಕ ಹೊರ ರಾಜ್ಯದಲ್ಲಿ ಮೀನುಗಳ ಮಾರಾಟ ಮಾಡುತ್ತಿದೆ. ಸ್ಥಳೀಯ ಮೀನುಗಾರರಿಗೆ ಕೆರೆ, ಕಟ್ಟೆ ಹಾಗೂ ಡ್ಯಾಂ ನಿಂದ ಮೀನುಗಾರಿಕೆಗೆ ಅನುವು ಮಾಡುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಚರ್ಚೆ ಮಾಡಿದ್ದು, ಶೀಘ್ರಗತಿಯಲ್ಲಿ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೀನುಗಾರಿಕೆ ಕುಟುಂಬಗಳಿಗೆ ಮನೆಗಳಿಗೆ ಹಿಂದಿನ ಸರ್ಕಾರ 40 ಸಾವಿರ ರು. ನೀಡಿದೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಮನೆಗಳಿಗೆ ತಲಾ 1.20 ಲಕ್ಷ ರು. ನೀಡುವ ಮಹತ್ವದ ನಿರ್ಧಾರ ಮಾಡಿದ್ದಾರೆ. ಹಾಗೂ ರಾಜ್ಯದಲ್ಲಿ ಮೀನುಗಾರಿಕೆ ಮನೆಗಳನ್ನು 4 ಸಾವಿರಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು. ಮೀನು ಮರಿಗಳನ್ನು ನೀಡುವಲ್ಲಿ ಸುಮಾರು 2 ಕೋಟಿ ವೆಚ್ಚ ಮಾಡಲಾಗಿದ್ದು, ಮೀನುಗಾರಿಕೆಗೆ ಸಂಬಂಧಿಸಿದ ಸಲಕರಣೆಗಳಿಗೆ 5 ಸಾವಿರ ರು. ನಿಂದ 10 ಸಾವಿರ ರು. ಹೆಚ್ಚಳ ಮಾಡಲಾಗಿದೆ. ಬಿಪಿಎಲ್ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಮೀನುಗಾರರ ಭದ್ರತೆ ಸಲುವಾಗಿ ಗುಂಪು ವಿಮೆ ಮಾಡುವ ಯೋಜನೆಯೂ ಸರ್ಕಾರದ ಮುಂದೆ ಇದೆ ಎಂದು ಹೇಳಿದರು.
ಸಮದ್ ಇನ್ನು ಮುಂತಾದ ಸ್ಥಳೀಯ ಮೀನುಗಾರರು ಇದ್ದರು.