ಆರೋಪ ಸಾಬೀತಾದರೆ ರಾಜಿನಾಮೆ
ಕನ್ನಡಪ್ರಭ ವಾರ್ತೆ ಹಾಸನ ಸೆ.21
ದುದ್ದ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಗೆ ವಿಧಿಸಿದ್ದ ಪೆನಾಲ್ಟಿ ಹಣವನ್ನು ಉಳಿಸಿಕೊಡಲು ನಾನು ಸಹಕರಿಸಿದ್ದೇನೆ ಎಂಬ ಆರೋಪ ಸಾಬೀತಾದರೆ ತಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಇಲ್ಲವಾದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸವಾಲು ಹಾಕಿದ್ದಾರೆ.
ನಗರದಲ್ಲಿ ಈ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ದುದ್ದ-ತಿಪಟೂರು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಭಿಜಿತ್ ಎಂಬ ಕಂಪನಿಯು ಕಾಮಗಾರಿಯನ್ನು ವಿಳಂಬಿಸಿದ್ದರಿಂದ ಅದಕ್ಕೆ ಪೆನಾಲ್ಟಿ ವಿಧಿಸಿದ್ದ ರು. 18 ಕೋಟಿ ಹಣವನ್ನು ನಾನು ಕಂಪನಿಯರಿಗೆ ಉಳಿಸಿಕೊಟ್ಟೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಒಂದು ವೇಳೆ ನಾನು ಪೆನಾಲ್ಟಿ ಹಣವನ್ನು ಉಳಿಸಿಕೊಟ್ಟಿದ್ದೇ ಆಗಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಗುಡುಗಿದರು.
ಈ ಮಾರ್ಗದಲ್ಲಿ ಮೈನಿಂಗ್ ಲಾರಿಗಳು ಸಂಚರಿಸುತ್ತಿದ್ದರಿಂದ ರಸ್ತೆ ಅಭಿವೃದ್ಧಿ ಪಡಿಸಿದರೆ ಉತ್ತಮ ಆದಾಯ ಸಂದಾಯ ಆಗುತ್ತದೆ ಎಂಬ ಉದ್ದೇಶದಿಂದ ಅಭಿಜಿತ್ ಕಂಪನಿ ರಸ್ತೆ ಅಭಿವೃದ್ಧಿಗೆ ಮುಂದಾಯಿತು. ತದನಂತರ ಮೈನಿಂಗ್ ಲಾರಿಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಆ ಕಂಪನಿಯುವರು ಅರ್ಧಕ್ಕೆ ರಸ್ತೆಯ ಕಾಮಗಾರಿಯನ್ನು ನಿಲ್ಲಿಸಿ ಹೋಗಿದ್ದಾರೆ. ಕಂಪನಿಯವರು ಬ್ಯಾಂಕ್ ನಲ್ಲಿ ಇಟ್ಟಿದಂತಹ ರು.11 ಕೋಟಿ ಸೆಕ್ಯೂರಿಟಿ ಡಿಪಾಟಿಟ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿದ್ದರಿಂದ ಅವರು, ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಲ್ಲದೆ ರಸ್ತೆಕಾಮಗಾರಿಗೆ ಬಳಸಬೇಕಾದ ಜಲ್ಲಿ ಕಲ್ಲುಗಳನ್ನು ನಾನು ಅಕ್ರಮವಾಗಿ ಸಾಗಿಸಿರುವುದಾಗಿ ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಆರೋಪಿಸಿದ್ದಾರೆ.
ಅದಕ್ಕೆ ನಾನು ಹಗರಣ ನಡೆಸಿದ್ದರೇ ನನ್ನ ಕೈಗಳನ್ನು ಕತ್ತರಿಸಿಕೊಳ್ಳುವುದಾಗಿ ಹೇಳಿದ್ದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರು ನನ್ನ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಅದೇನೆ ದಾಖಲೆಗಳಿದ್ದರೂ ಬಿಡುಗಡೆಗೊಳಿಸಲಿ. ಈ ಪ್ರಕರಣವನ್ನು ಸಿಓಡಿ ಯಿಂದ ತನಿಖೆ ಮಾಡಿಸಲಿ ಎಂದ ಅವರು, ಒಂದು ವೇಳೆ ನಾನು ಹಗರಣ ನಡೆಸಿರುವುದು ಸಾಬೀತಾದರೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಇಲ್ಲವಾದಲ್ಲಿ ಕಾಂಗ್ರೆಸ್ ಮುಖಂಡರು ರಾಜಿನಾಮೆ ನೀಡುವಂತೆ ಶಾಸಕ ಶಿವಲಿಂಗೇಗೌಡ ಸವಾಲು ಹಾಕಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯ ಹುಚ್ಚೇಗೌಡ ಇದ್ದರು.