ಇತಿಹಾಸದ ಅರಿವು ನೀಡದ ಶಿಕ್ಷಣ ವ್ಯರ್ಥ
ಕ.ಪ್ರ. ವಾರ್ತೆ ಬೇಲೂರು ಸೆ. 21
ಇಂದಿನ ದಿನ ಮಾನದಲ್ಲಿ ಇತಿಹಾಸ ಅರಿವು ನಮಗೆ ಬೇಡವೆಂದು ಹೇಳುವವರು ಹಲವರು ಇದ್ದಾರೆ. ಆದರೆ ಇತಿಹಾಸದ ಬಗ್ಗೆ ಅರಿವು ನೀಡದಿರುವ ಶಿಕ್ಷಣ ವ್ಯರ್ಥವಾಗುತ್ತದೆ ಎಂದು ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪ್ರೊ. ಸಿ.ಆರ್. ಮನೋಜ್ ತಿಳಿಸಿದರು.
ಪಟ್ಟಣದ ಚನ್ನಕೇಶವ ದೇವಸ್ಥಾನ ಆವರಣದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಬೇಲೂರು ವೈಡಿಡಿ ಪ್ರಥಮ ದರ್ಜೆಕಾಲೇಜು ಪರಂಪರಾ ಕೂಟ ಅಶ್ರಯದಲ್ಲಿ ಇತ್ತೀಚೆಗೆ ನಡೆದ ಪರಂಪರೆ ಉಳಿಸಿ ಮತ್ತು ಬೆಳೆಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂರಕ್ಷಣೆ ಅತ್ಯಗತ್ಯ: ಮನುಷ್ಯನ ನಾಗಾಲೋಟದ ಬದುಕಿನಲ್ಲಿ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅರಿವು ಇಲ್ಲದೆ ಯಾಂತ್ರಿಕ ಜೀವನಕ್ಕೆ ಸಾಗುತ್ತಾ ತನ್ನ ಬದುಕನ್ನು ಸರ್ವ ನಾಶ ಮಾಡಿಕೊಂಡಿದ್ದಾನೆ. ಗುರು ಮತ್ತು ಗುರಿ ಇಲ್ಲದ ಶಿಕ್ಷಣ ಸಂಸ್ಕಾರಕ್ಕೆ ತಡೆಯಾಗುತ್ತದೆ ಎಂದ ಅವರು, ವಿಶ್ವ ವಿಖ್ಯಾತ ಬೇಲೂರು ಹಳೇಬೀಡು ಅನಾದಿ ಕಾಲದ ಸಂಸ್ಕತಿಯ ಚೇತನವಾಗಿದೆ. ಇವುಗಳ ಸಂರಕ್ಷಣೆ ಮಾಡುವಲ್ಲಿ ಮಹತ್ವ ಪಾತ್ರವಿದೆ ಎಂದರು.
ಅಜ್ಜ-ಅಜ್ಜಿ ಸಂಸ್ಕೃತಿ ಮಾಯ: ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, ಪರಂಪರೆ ಎಂದರೆ ದೇವಾಸ್ಥಾನಕ್ಕೆ ಮಾತ್ರ ಸೀಮಿತವಾದ ನಾವುಗಳು ಕೌಟಿಂಬಿಕ ಬದುಕಿನಲ್ಲಿ ಹಿಂದೆ ಸಾಗಿದ್ದೇವೆ. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಿಗೆ ಮೊರೆ ಹೋಗಿ ಇಂದು ಗಂಡ ಹೆಂಡತಿಯ ನಡುವೆ ಒಡಕಿಗೆ ಕಾರಣವಾಗಿದೆ. ಅಜ್ಜ-ಅಜ್ಜಿ ಸಂಸ್ಕೃತಿ ಹಾಗೂ ಪರಂಪರೆಯ ಚೇತನವೆಂಬ ವಿಚಾರವನ್ನು ಮರೆತು ನಾಗಾಲೋಟದ ನಾಗರಿಕ ಬದುಕಿಗೆ ಸಾಗುವ ನಮಗೆ ಇಂತಹ ಪರಂಪರೆ ಕೂಟಗಳು ಮಾರ್ಗದರ್ಶನವಾಗಬೇಕು ಹಾಗೂ ಯುವಜನತೆನಮ್ಮ ಸಾಹಿತ್ಯದ ಅಡಿಪಾಯವಾದ ಜನಪದ ಸಾಹಿತ್ಯ ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.
ಕೀಳರಿಮೆ ಬೇಡ: ಕಾಲೇಜು ಪ್ರಾಂಶುಪಾಲ ಪ್ರೊ. ಡಿ.ಎಸ್.ರಾಜು ಮಾತನಾಡಿ, ಶಿಕ್ಷಣ ಮೂಲಕ ದೇಶದ ಅರ್ಥಿಕ ಮಟ್ಟವನ್ನು ಸುಧಾರಣೆ ಮಾಡಬಹುದು ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಬಂದ ವಿದ್ಯಾರ್ಥಿಗಳು ಎಂದಿಗೂ ನಾವು ಹಳ್ಳಿಯವರು ಎಂಬ ಕೀಳರಿಮೆ ಬೇಡ, ಕಾರಣ ಇಂದು ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳು ಗ್ರಾಮೀಣ ಪ್ರದೇಶದಿಂದ ಬಂದವರು ಈ ದಿಸೆಯಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ತಮ್ಮ ಪ್ರತಿಮೆಗಳನ್ನು ಇಂತಹ ವೇದಿಕೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಪರಂಪರೆ ಉಳಿಸಿ ಬೆಳಸಬೇಕು ಎಂದರು.
ಯುನೈಟೆಡ್ ಅಕಾಡೆಮಿ ಶಾಲಾ ಕಾರ್ಯದರ್ಶಿ ವಿ.ಎಸ್.ಬೋಜೇಗೌಡ, ಸಾಹಿತಿ ಡಾ.ರಾಜಶೇಖರ ಮಠಪತಿ, ಪರಂಪರಾ ಕೂಟದ ಸಂಚಾಲಕ ಪ್ರೊ.ಕೆ.ವಿ.ಜಯರಾಮು, ದೈಹಿಕ ಶಿಕ್ಷಣದ ಮುಖ್ಯಸ್ಥ ಮಹದೇವಪ್ಪ, ಗ್ರಂಥಪಾಲಕ ದೇವರಾಜು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪರಂಪರೆ ಉಳಿಸಿ ಬೆಳೆಸಿ ಎಂಬ ಘೋಷಣೆ ಹಾಕುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸಿದರು.