ಶ್ರಮ ವಿನಿಮಯ ಯೋಜನೆಗೆ ಚಾಲನೆ
ಹೊಳೆನರಸೀಪುರ: ತಾಲೂಕಿನ ಕಡವಿನಬಾಚಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಂಜನೇಯ ಪ್ರಗತಿ ಬಂಧು ತಂಡದ ಶ್ರಮ ವಿನಿಮಯ ಯೋಜನೆಗೆ ಕೃಷಿ ಅಧಿಕಾರಿ ಚಂದ್ರಪ್ಪ ಇತ್ತೀಚೆಗೆ ಚಾಲನೆ ನೀಡಿದರು.
ಪ್ರಗತಿ ಬಂಧು ತಂಡಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ರೈತರಲ್ಲಿ ಸಂಘಟನಾ ಮನೋಭಾವ, ಉಳಿತಾಯಕ್ಕೆ ಉತ್ತೇಜನ, ಸಹಬಾಳ್ವೆ, ಹೊಂದಾಣಿಕೆ ಹಾಗೂ ಪರಸ್ಪರ ಸಹಕಾರದ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹಾಗೂ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯವನ್ನು ಯೋಜನೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ಮಾಡುತ್ತಿದ್ದು, ರೈತರಿಗೆ ಆಧ್ಯಯನ ಪ್ರವಾಸ, ಸರ್ಕಾರಿ ಸೌಲಭ್ಯಗಳ ಪರಿಚಯ, ಅಗತ್ಯ ಮಾಹಿತಿ ಮತ್ತು ಸಾಲ ಸೌಲಭ್ಯಗಳ ಒದಗಣೆ ಮಾಡುವ ಮೂಲಕ ರೈತರಿಗೆ ಸುಧಾರಿತ ಕೃಷಿ ವಿಧಾನಗಳ ಬಗ್ಗೆ ಅರಿವು ಮೂಡಿಸಲು ಸಂಘಟನೆಯು ಮುಂದಾಗಿದೆ ಎಂದು ಹೇಳಿದರು.
ಪ್ರಗತಿಪರ ರೈತ ಬಸವಲಿಂಗಪ್ಪ ತಂಡಗಳಿಗೆ ದಾಖಲಾತಿ ಹಸ್ತಾಂತರಿಸಿದರು. ವಲಯ ಮೇಲ್ವಿಚಾರಕ ಜಯರಾಮ್, ಸೇವಾ ಪ್ರತಿನಿಧಿ ಸುಗುಣ, ತಂಡದ ಪದಾಧಿಕಾರಿಗಳು ಹಾಗೂ ರೈತರಾದ ಕುಮಾರಶೆಟ್ಟಿ, ರಂಗಪ್ಪ, ಸ್ವಾಮಿಶೆಟ್ಟಿ, ಕುಮಾರ, ಪ್ರದೀಪ ಮತ್ತಿತರರು ಇದ್ದರು.
ಶಾಲೆಗಳಿಗೆ ಹೆಚ್ಚುವರಿ ಕೊಠಡಿ ಮಂಜೂರು
ಸಕಲೇಶಪುರ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ತಾಲೂಕಿನ 7 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಉದೇವಾರ ಪ್ರೌಢಶಾಲೆಯ ಅವರಣದಲ್ಲಿ ಇತ್ತೀಚೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೇರವೆರಿಸಿ ಮಾತನಾಡಿ, ತಾಲೂಕಿನ ಗ್ರಾಮಾಂತರ ಪ್ರದೇಶದ ಚಂಗಡಿಹಳ್ಳಿ, ವಣಗೂರು, ಬೆಳಗೋಡು, ಹೊಂಗಡಹಳ್ಳ ಹಾಗೂ ಉದೇವಾರ ಗ್ರಾಮದಲ್ಲಿರುವ ಪ್ರೌಢಶಾಲೆಗಳಿಗೆ ಹೆಚ್ಚುವರಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಉದೇವಾರ ಶಾಲೆಯಲ್ಲಿ ರು. 49 ಲಕ್ಷ ವೆಚ್ಚದಲ್ಲಿ ಆರು ಕೊಠಡಿಗಳ ನಿರ್ಮಿಸಲಾಗುತ್ತಿದೆ ಎಂದರು. ಉದೇವಾರ ಗ್ರಾಪಂ ಅಧ್ಯಕ್ಷೆ ಉಪಾಧ್ಯಕ್ಷ ಫೈರೋಜ್, ತಾಪಂ ಅಧ್ಯಕ್ಷೆ ಮಂಜುಳಾ, ವೇದಾವತಿ, ಸುಲೋಚನಾ ಇತರರು ಇದ್ದರು.