ಕಾಡಾನೆ ದಾಳಿ: ಬತ್ತ-ಬಾಳೆ ನಾಶ
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಬೋಸ್ಮಾನಹಳ್ಳಿ, ಮಳಗಳಲೆ, ಕಾಗನೂರು, ಬೆಂಬಳೂರು, ಮಾದಿಹಳ್ಳಿ, ಹರಿಹಳ್ಳಿ, ಬಿಗತ್ತೂರು ಹಾಗೂ ಮುಂತಾದ ಗ್ರಾಮಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಕಾಡಾನೆಗಳು ಹಾವಳಿ ನಡೆಸಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಬತ್ತ, ಶುಂಠಿ, ಮೆಕ್ಕೆಜೋಳ, ಮೆಣಸು, ಕಿತ್ತಲೆ, ಅಡಕೆ, ಏಲಕ್ಕಿ, ಬಾಳೆ ಮುಂತಾದ ಬೆಳೆಗಳನ್ನು ನಾಶಗೊಳಿಸಿ ಲಕ್ಷಾಂತರ ಮೌಲ್ಯದ ನಷ್ಟ ಉಂಟು ಮಾಡಿದೆ.
ಕಳೆದ ರಾತ್ರಿ ಬೋಸ್ಮಾನಹಳ್ಳಿ, ಮಳಗಳಲೆ ಗ್ರಾಮಗಳ ಆಸು-ಪಾಸಿನಲ್ಲಿ ಬೀ ಡುಬಿಟ್ಟಿರುವ 18 ಆನೆಗಳ ಹಿಂಡು ಜಿಲ್ಲಾ ಪಂಚಾಯ್ತಿ ಸದಸ್ಯ ಪುರುಷೋತ್ತಮ್ ಅವರ ಬತ್ತದ ಗದ್ದೆಯನ್ನು ಸಂಪೂರ್ಣ ಹಾಳು ಮಾಡಿದ್ದು, ಮಾದಿ ಹಳ್ಳಿಯ ಸುತ್ತಮುತ್ತ 5 ಆನೆಗಳ ಹಿಂಡು, ಕಾಗನೂರು ಬಳಿ 7ಆನೆಗಳ ಹಿಂಡು, ಬೆಂಬಳೂರು ಬಳಿ 5 ಆನೆ, ಹರಿಹಳ್ಳಿಟೆಂಪಲ್ ಬಳಿ, ಒಂಟೀ ಮಕ್ನಾ ಆನೆ ಸೇರಿದಂತೆ ಬೀಡು ಬಿಟ್ಟಿದ್ದು, 30 ವರ್ಷಕ್ಕೂ ಹಳೆಯದಾದ ಸಾವಿರಾರು ಕಾಫಿ ಗಿಡಗಳನ್ನು ಬುಡಸಮೇತ ಕಿತ್ತು ನಾಶಗೊಳಿಸಿವೆ. ಮಳಗಳಲೆ ಗ್ರಾಮದ ನಟೇಶ್, ಮಾದಿಹಳ್ಳಿ ಚಂದ್ರೇಗೌಡ, ತಿಮ್ಮಯ್ಯ, ರಾಜಯ್ಯ, ಬೆಂಬಳೂರು ತ್ಯಾಗರಾಜ್, ಹರಿಹಳ್ಳಿಯ ರವಿ ಹಾಗೂ ಮುಂತಾದವರ ಕಾಫಿ, ಭತ್ತ, ಅಡಿಕೆ ಸೇರಿದಂತೆ ನೂರಾರು ಎಕರೆ ಪ್ರದೇಶದ ಬೆಳೆಯನ್ನು ತಿನ್ನುವುದಕ್ಕಿಂತಲು ಹೆಚ್ಚಾಗಿ ಮರಿಯಾನೆಗಳ ಚಿನ್ನಾಟದಿಂದ ನಾಶಗೊಳಿಸಿರುವುದೇ ಹೆಚ್ಚಾಗಿದೆ.ಶನಿವಾರ ರಾತ್ರಿ ದಿಗತ್ತೂರು ಗ್ರಾಮದ ಐಬಿಸಿ ಕಂಪನಿಯ ತೋಟಕ್ಕೆ ದಾಳಿ ಇಟ್ಟ ಆನೆಗಳ ಹಿಂಡು, ನೂರಾರು ಕಿತ್ತಲೆ ಗಿಡಗಳನ್ನು ಮುರಿದು ಹಾಳುಗೆಡವಿದ್ದು, 10ಎಕರೆಗೂ ಹೆಚ್ಚು ಪ್ರದೇಶದ ಕಾಫಿ ಬೆಳೆಯನ್ನು ಮುರಿದು ಹಾಳುಗೆಡವಿದೆ. ಅಷ್ಟೇ ಅಲ್ಲದೆ ಕಳ್ಳಬಟ್ಟಿಯ ರುಚಿಕಂಡಿರುವ ಈ ಆನೆಗಳು, ಕಂಪನಿಯವರು ಬೆಳೆಗಳಿಗೆ ಔಷಧಿ ಸಿಂಪಡಿಸಲು ಇಟ್ಟಿದ್ದ ಡ್ರಂಗಳನ್ನು ಹೊಡೆದು ಜಜ್ಜಿ ಹಾಕಿವೆ.
ವಿಪರೀತ ತೊಂದರೆ: ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ವಿಪರೀತ ತೊಂದರೆ ನೀಡುತ್ತಿರುವ ಕಾಡಾನೆಗಳ ಹಿಂಡು ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿಗಳಲ್ಲಿ ಎಡಬಿಡದೆ ಪ್ರತಿನಿತ್ಯ ದಾಳಿ ನಡೆಸುತ್ತಿದ್ದು, ಕೂಲಿ ಮಾಡಲು ತೋಟ, ಗದ್ದೆಗಳಿಗೆ ಹೋಗಲು ಭಯಗೊಂಡಿರುವ ಜನತೆ ಪಟ್ಟಣ ಪ್ರದೇಶಕ್ಕೆ ಕುಳೆ ಹೋಗಿ ಜೀವನ ನಡೆಸೋಣ ಎಂದರೆ ಅವರಿಗೆ ವ್ಯವಸಾಯ ಬಿಟ್ಟರೆ ಬೇರೆ ಉದ್ಯೇಗ ತಿಳಿಯದಾಗಿದ್ದು, ಈ ಭಾಗದ ಹವಾಗುಣ ಹಾಗೂ ಬೆಳೆಗಳು ಬೇರೆ ರೀತಿಯದ್ದಾಗಿದ್ದು, ಜನತೆ ಬೇರೆಡೆ ವ್ಯವಸಾಯದ ಕೆಲಸ ಮಾಡಲು ಸಹ ಸಾಧ್ಯವಾಗದಂತಾಗಿದೆ.