ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅತ್ಯಾಚಾರಿಗಳ ದೇಶ ಆಗುತ್ತಿರುವುದು ದುರ್ದೈವದ ಸಂಗತಿ: ಕಲಾವಿದ ದೀಪು

Srinivasa Murthy VN
Updated On : 24 Sept 2013, 12:09 pm

ಕ.ಪ್ರ ವಾರ್ತೆ ಹಾಸನ ಸೆ. 23
ಶಾಂತಿನಗರ ಘಟಕ ಬಿಜಿವಿಎಸ್ ಮಾಹೆಯಾನ ಹಮ್ಮಿಕೊಳ್ಳುತ್ತಿರುವ ಅನಿಸಿಕೆ-ಅಭಿವ್ಯಕ್ತಿ 9ನೇ ಮಾಸಿಕ  ಕಾರ್ಯಕ್ರಮ ಹೇಮಾವತಿ ನಗರದ ಸಾಹಿತಿ ಮತ್ತು ಶಿಕ್ಷಕ ದೇವರಾಜೇಗೌಡರ ಮನೆಯಲ್ಲಿ ನಡೆಯಿತು.
  ಕಲಾವಿದ ದೀಪು ಮಾತನಾಡಿ, ಭಾರತ ಅತ್ಯಾಚಾರಿಗಳ ದೇಶವಾಗುತ್ತಿರುವುದು ದುರ್ದೈವದ ಸಂಗತಿ. ಭಾರತ ತನ್ನ ಭವ್ಯತೆಯನ್ನು ಕಳೆದುಕೊಂಡು, ಜಾತಿ ಧರ್ಮಾಂಧತೆ ಬೆಳೆದಿದೆ. ಬೇರೆ ದೇಶಗಳು ವಿಜ್ಞಾನದ ಹಾದಿ ಹಿಡಿದು ನಾಗರಿಕ ವ್ಯವಸ್ಥೆಯತ್ತ ಮುನ್ನುಗ್ಗಿ ಸಾಗಿದೆ. ಇದನ್ನು ಭಾರತದ ಆಳುವ ವರ್ಗ, ಧಾರ್ಮಿಕ ಪಂಥ ಹಾಗೂ ಸಾಂಸ್ಕೃತಿಕ ದಿಗ್ಗಜರು ಮನಗಾಣಬೇಕು ಎಂದು ಹೇಳಿದರು.
 ದೆಹಲಿ ಅತ್ಯಾಚಾರಿಗಳ ಗಲ್ಲು ಶಿಕ್ಷೆಯ ಕುರಿತ ಭಾವನೆಗಳನ್ನು ಅವರು ತಮ್ಮ ಕಲಾಕುಂಚದಲ್ಲಿ ಅಭಿವ್ಯಕ್ತಿಸಿ ವಿವರಿಸಿದರು. ಮಾನವತ್ವ, ಸಹೋದರತ್ವ, ಭಾಂಧವ್ಯವನ್ನು ಮನೆ ಮನೆಗಳಲ್ಲಿ ನಾವು ನಮಗೆ ತಿಳಿದ ಭಾಷೆಯಲ್ಲಿ ಭಿತ್ತರಿಸಬೇಕು ಎಂದು ಹೇಳಿದರು.
 ಸಾಹಿತಿ ದೇವರಾಜೇಗೌಡ ಕಂಬಳಿ ಹುಳುವಿನ ಜೀವನ ವೃತ್ತಾಂತ, ಕನ್ನಡಿಯ ಸಾಮಾಜಿಕ ಬಳಕೆಯನ್ನು ವಿವರಿಸಿದರು. ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಮಾತನಾಡಿ,  ಸೆಪ್ಟೆಂಬರ್ ತಿಂಗಳು ಡಾ. ರಾಧಾಕೃಷ್ಣನ್, ವಿಶ್ವೇಶ್ವರಯ್ಯರನ್ನು ನೆನೆಯುವ, ಜೊತೆಗೆ ಸಂಭ್ರಮದ ಗಣೇಶ ಹಬ್ಬ ಆಚರಿಸುವ ವಿಶೇಷ ಮಾಹೆಯಾಗಿದೆ ಎಂದರು.
 ನಿವೃತ್ತ ಎಂಜಿನಿಯರ್ ಎನ್.ಕುಮಾರ್ ಅಧ್ಯಕ್ಷತೆ ವಹಿಸಿದ್ದು, ಸರ್.ಎಂ.ವಿ ಅವರು ಭಾರತದ ಅಭಿವೃದ್ಧಿಯ ಕನಸು ಕಂಡವರು. ಅವರ ಅವಿರತ ಶ್ರಮದಿಂದಲೇ ಭಾರತ ಅಭಿವೃದ್ಧಿಯ ಸಾಧನೆ ಮಾಡಿತು ಎಂದು ನುಡಿದರು.
 ನಾಗರತ್ನ ಹಾಗೂ ಗಾಯತ್ರಿ ಮಾನವತ್ವ, ಪರಿಸರ ಹಾಗೂ ಭಾವಗೀತೆಗಳನ್ನು ಹಾಡಿದರು. ಕವಯತ್ರಿ ಚೂಡಾಮಣಿ ಹಾಗೂ ದೇವರಾಜೇಗೌಡ ಕವನ ವಾಚಿಸಿದರು. ವಿದ್ಯಾರ್ಥಿ ರಾಜೇಶ್ ಚುಟುಕ ವಾಚಿಸಿದರು. ಕವಿತ ಜಯಪ್ರಕಾಶ ಕವನವಿಮರ್ಶಿಸಿದರು. ಲಲಿತ ದೇವರಾಜೇಗೌಡ  ಸ್ವಾಗತಿಸಿದರು. ದೇವರಾಜೇಗೌಡ ವಂದಿಸಿದರು. ವೇದಶ್ರೀ ಇದ್ದರು.

ಗೌರಮ್ಮ ದೇವಿ ವಿಸರ್ಜನಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಜಾವಗಲ್ ಸೆ. 23
ಇಲ್ಲಿನ ಪೇಟೆಬೀದಿ ಬಸವೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀಗೌರಮ್ಮ ದೇವಿ ವಿಸರ್ಜನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಮಂಜಾನೆ ದೇಗುಲದಲ್ಲಿ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ನಂತರ, ಪುಷ್ಪಾಲಂಕೃತ ವಾಹನದಲ್ಲಿ ಮತ್ತು ಗ್ರಾಮದೇವತೆ ಕರಿಯಮ್ಮ, ಪ್ಲೇಗಿನಮ್ಮ, ದೊಡ್ಡಮ್ಮದೇವಿಯನ್ನು ಕುಳ್ಳಿರಿಸಿ ಕಡೂರು ಮಲದೇವಿಹಳ್ಳಿ ತಂಡದವರ, ಕರಡೆವಾದ್ಯ, ತುಮಕೂರು ಬಸವರಾಜು ವೃಂದದವರಿಂದ ವಿರಭದ್ರಕುಣಿತ, ಚೋಮಗಳ(ಸೋಮ) ಕುಣಿತ ಮತ್ತು ಡೊಳ್ಳು ಕುಣಿತದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮದ್ದುಗುಂಡು ಪಟಾಕಿಗಳ ಸಿಡಿತದೊಂದಿಗೆ ಅದ್ದೂರಿಯಿಂದ ಮೆರವಣಿಗೆ ನಡೆಸಲಾಯಿತು. ಗ್ರಾಮದ ಪ್ರತಿ ಮನೆಗಳ ಮುಂದೆ ನೀರು ಹಾಕಿ, ರಂಗವಲ್ಲಿಯಿಂದ ಶೃಂಗರಿಸಿ ಸುಮಂಗಲಿಯರು ದೇವಿಯ ಅಗಮನಕ್ಕೆ ಕಾದುನಿಂತು ಹಣ್ಣುಕಾಯಿ ಪೂಜೆ ಸಲ್ಲಿಸಿ, ಅರತಿ ಎತ್ತಿ, ಮಡಿಲಕ್ಕಿ ಒಪ್ಪಿಸಿ ದೇವಿಗೆ ಭಕ್ತಿಗೌರವ ಸಮರ್ಪಿಸಿದರು. ಗೌರಮ್ಮ ಸೇವಾಸಮಿತಿ ಸೇರಿದಂತೆ ನೂರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ನಂತರ ಶ್ರೀಗೌರಮ್ಮ ದೇವಿ ಮೂರ್ತಿಯನ್ನು ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement