ಕರ್ನಾಟಕದಲ್ಲೇ ಕನ್ನಡಿಗರ ಕಡೆಗಣನೆ: ನಟರಾಜ್ ವಿಷಾದ
ಕನ್ನಡಪ್ರಭ ವಾರ್ತೆ ಆಲೂರು ಸೆ. 23
ಕರ್ನಾಟಕದಲ್ಲಿಯೇ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದ್ದು ಹೊರ ರಾಜ್ಯದ ಜನರ ಕಾರುಬಾರು ಹೆಚ್ಚಾಗಿ ನಡೆಯುತ್ತಿದೆ. ಸ್ಥಳೀಯರಿಗೆ ಕೆಲಸ ನೀಡುವಲ್ಲಿ ಪ್ರಥಮ ಆದ್ಯತೆ ನೀಡಬೇಕೆಂದು ಕರವೇ ತಾಲೂಕು ಅಧ್ಯಕ್ಷ ನಟರಾಜ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ ಶೇ.80, ಒರಿಸ್ಸಾ ಶೇ.90 ಹಾಗೂ ಗುಜರಾತ್ ರಾಜ್ಯದಲ್ಲಿ ಶೇ.85 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಟ್ಟಿವೆ. ಆದರೆ ಸರೋಜಿನಿ ಮಹಿಷಿ ಯೋಜನೆ ಜಾರಿಗೆ ಬಂದು 26 ವರ್ಷ ಕಳೆದರೂ ಕರ್ನಾಟಕದಲ್ಲಿ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕರವೇ ಸೆ.25ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಬೆಳಗ್ಗೆ 10ಕ್ಕೆ ವೇದಿಕೆಯ ಸಾವಿರಾರು ಕಾರ್ಯಕರ್ತರು, ಗಣ್ಯರು, ಮಠಾಧೀಶರು ಹಾಗೂ ಸಾಹಿತಿಗಳು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ಒತ್ತಾಯಿಸಿ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಗೌರವಾಧ್ಯಕ್ಷ ರಾಜಪ್ಪ, ತಾ. ಉಸ್ತುವಾರಿ ಸುರೇಶ್, ನಗರಾಧ್ಯಕ್ಷ ಪಿ.ಮಧು, ಉಪಾಧ್ಯಕ್ಷ ಇ.ಪಿ.ಮೋಹನ್, ತಾ ಪ್ರಧಾನ ಕಾರ್ಯದರ್ಶಿ ಮಧು, ಸಂಚಾಲಕ ಉದಯ್ ಇದ್ದರು.
ಇಂದು ಯುವ ಸಮಾವೇಶ
ಚನ್ನರಾಯಪಟ್ಟಣ: ವಿವೇಕಾನಂದರ 150ನೇ ವರ್ಷಾಚರಣಾ ಸಮಿತಿಯಿಂದ ಪಟ್ಟಣದ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಸೆ.24ರ ಬೆಳಗ್ಗೆ 10.30 ಕ್ಕೆ ಯುವ ಸಮಾವೇಶ ಏರ್ಪಡಿಸಲಾಗಿದೆ. ಮೈಸೂರು ವಿಭಾಗದ ಆರ್ಎಸ್ಎಸ್ ಸಹ ಕಾರ್ಯವಾಹಕ ವೆಂಕಟರಾಮ್ ಭಾಗವಹಿಸುವರು. ನಾಗಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಆನಂದ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಹಾಸನ: ತುರ್ತು ಕಾರ್ಯ ನಿಮಿತ್ತ ಸೆ.24 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಹಗರೆ, ಹುಲುಗುಂಡಿ, ಮಲ್ಲಾಪುರ, ದೇವಿಹಳ್ಳಿ, ಮಾದಿಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಸೋಮವಾರ 5385 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ಮಟ್ಟ 2921.81 ಅಡಿ, 36.919 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 250 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 150 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3167.71 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು ನಾಲೆಗೆ 25 ಕ್ಯುಸೆಕ್ ಒಟ್ಟು 1.412 ಟಿಎಂಸಿ ನೀರು ಸಂಗ್ರಹವಾಗಿದೆ.
ಹೋಬಳಿವಾರು ಮಳೆ ವಿವರ: ಸಕಲೇಶಪುರ ತಾಲೂಕಿನ ಮಾರನಹಳ್ಳಿ 0.3, ಹೊಸೂರು 2.2 ಮಿ.ಮೀ ಮಳೆಯಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹೆಚ್ಚಳ
ಹಾಸನ: ರಾಜ್ಯದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಮಾಸಿಕ ಪಿಂಚಣಿ 5000 ದಿಂದ 6000 ರು.ಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.
ವಿಷ ಸೇವಿಸಿ ಯುವತಿ ಆತ್ಮಹತ್ಯೆ
ಸಕಲೇಶಪುರ: ಜೀವನದಲ್ಲಿ ಜಿಗುಪ್ಸೆ ಹೊಂದಿ ಯುವತಿಯೊಬ್ಬಳು ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೊಂಕರವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪ್ರಿಯ(20)ಆತ್ಮಹತ್ಯೆಗೆ ಶರಣಾದ ಯುವತಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಶುಂಠಿ ಬೆಳೆಗೆ ಸಿಂಪಡಿಸಲು ತಂದಿದ್ದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೋಷಕರ ಅಸಮಾಧಾನ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಯುವತಿ ಶವಪರೀಕ್ಷೆ ನಡೆಸಲು ವೈದ್ಯರಿದ್ದೂ, ಅಗತ್ಯ ಡಿ ದರ್ಜೆ ನೌಕರರಿಲ್ಲದೆ ಪರದಾಡಿದ ಪೋಷಕರು ತಮ್ಮ ಸಂಬಂಧಿಕರನ್ನು ಬೆಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಅಲ್ಲಿನ ಡಿ ದರ್ಜೆ ನೌಕರರನ್ನು ಕರೆ ತಂದು ಶವಪರೀಕ್ಷೆಗೆ ಸಹಕರಿಸಿದರು. ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನ ಬೇದರಿಕೆ: ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನೇಮಿಸುವಂತೆ ಒತ್ತಾಯಿಸಿ ಮುಂದಿನ ಎರಡು ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಯ ಕರ್ನಾಟಕ ಸಂಘ ಹಾಗೂ ಕರವೇ ಕಾರ್ಯಕರ್ತರು ಎಚ್ಚರಿಸಿದ್ದಾರೆ.