ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತೂಕದಲ್ಲಿ ಮೋಸ: ನ್ಯಾಯ ಬೆಲೆ ಅಂಗಡಿಗೆ ಬೀಗ

Srinivasa Murthy VN
Updated On : 24 Sept 2013, 12:08 pm

ಕ.ಪ್ರ.ವಾರ್ತೆ ಸಕಲೇಶಪುರ ಸೆ.23
ಪಡಿತರ ವಿತರಣೆಯಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ತಾರುಣ್ಯ ಮಹಿಳಾ ಸಮಾಜದ ನ್ಯಾಯಬೆಲೆ ಅಂಗಡಿಗೆ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಅವರು ಬೀಗ ಜಡಿದ ಘಟನೆ ಭಾನುವಾರ ನಡೆಯಿತು.
ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ತಾರುಣ್ಯ ಮಹಿಳಾ ಸಮಾಜ ಹೆಸರಿನಲ್ಲಿ ರಾಜಮ್ಮ ಎಂಬುವರು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡುವ ಸಂದರ್ಭ ತೂಕದಲ್ಲಿ ಭಾರಿ ಅನ್ಯಾಯ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಉಪವಿಭಾಗಾಧಿಕಾರಿ ಶ್ರೀ ವಿದ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂಗಡಿಗೆ ಬೀಗ ಹಾಕಿ ತನಿಖೆಗೆ ಆದೇಶಿಸಿದರು.
ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಗ್ರಾಹಕರು ಅಹಾರ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅಹಾರ ಇಲಾಖೆ ಅಧಿಕಾರಿ ರಾಮೇಗೌಡ ಅಕ್ಕಿಯನ್ನು ಅಳತೆ ಮಾಡಿದಾಗ 27 ಕೆ ಜಿ ಗೆ ಬದಲಾಗಿ 24 ಕೆಜಿ ಇದ್ದರೆ, ಸಕ್ಕರೆ 1 ಕೆಜಿಗೆ ಬದಲಾಗಿ 8.50 ಗ್ರಾಂ ಕಂಡುಬಂತು. ಇವುಗಳನ್ನು ಪರಿಶೀಲಿಸಿದ ಉಪವಿಭಾಧಿಕಾರಿ ನ್ಯಾಯಬೆಲೆ ಅಂಗಡಿಗೆ ಬೀಗಹಾಕುವಂತೆ ಅದೇಶಿಸಿದರು.
ಅಕ್ಕಿಯೊಂದಿಗೆ ಸೋಪು, ಅಡಿಗೆ ಎಣ್ಣೆ ಕೊಳ್ಳಬೇಕು ಎಂದು ಕಡ್ಡಾಯ ಮಾಡಿರುವುದರಿಂದ ಬಹುತೇಕ ಗ್ರಾಹಕರು ಪಡಿತರ ಕೊಳ್ಳಲು ಸಾಧ್ಯವಾಗುತ್ತಿಲ್ಲ.  ನ್ಯಾಯಬೆಲೆ ಅಂಗಡಿ ಬಂದ್ ಮಾಡಬೇಕು ಹಾಗೂ ಇಲ್ಲಿನ ಗ್ರಾಹಕರಿಗೆ ಪಡಿತರ ನೀಡಲು ಬದಲಿ ವ್ಯವಸ್ಥೆ ಮಾಡ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಶ್ರೀವಿದ್ಯಾ ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ನ್ಯಾಯಬೆಲೆ ಅಂಗಡಿಯನ್ನು ಬಂದ್ ಮಾಡಿ ತನಿಖೆ ಕೈಗೊಳ್ಳಲಾಗುತ್ತಿದೆ. ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸ್ಥಳಕ್ಕೆ ತಹಸಿಲ್ದಾರ್ ಪಾರ್ವತಿ ಭೇಟಿ ನೀಡಿ, ಉಪವಿಭಾಗಾಧಿಕಾರಿ ಆದೇಶದಂತೆ ನ್ಯಾಯಬೆಲೆ ಅಂಗಡಿಗೆ ಬೀಗಹಾಕಿ ಅಕ್ಕಿ, ತೂಕದ ಬಟ್ಟು ಅಗತ್ಯ ಪುಸ್ತಕಗಳನ್ನು ವಶಕ್ಕೆ ಪಡೆದುಕೊಂಡರು. ಸಿಪಿಐ ದಿನೇಶ ಪಟೇಲ್ ಇದ್ದರು. ಸಯ್ಯದ್ ಮಫೀಝ್, ಸುನಿತಾ, ಶೋಭ, ಪದ್ಮಾವತಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement