ವಿಶ್ವ ಶಾಂತಿಗಾಗಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ
ಕ.ಪ್ರ.ವಾರ್ತೆ ಹಾಸನ ಸೆ. 23
ಜಗತ್ತಿನಾದ್ಯಂತ ಆವರಿಸಿರುವ ಯುದ್ಧಭೀತಿ ಹಾಗೂ ನಡೆಯುತ್ತಿರುವ ಯುದ್ಧಗಳಿಂದ ವಿಶ್ವಶಾಂತಿಗೆ ದೊಡ್ಡ ಅಪಾಯ ಎದುರಾಗಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಸಿ.ಡಿ.ಶಿವಕುಮಾರ್ ಹೇಳಿದರು.
ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ವಿಶ್ವಶಾಂತಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ನಿರ್ಜಲ ಉಪವಾಸ, ಶಾಂತಿ ಜಾಥಾ ಹಾಗೂ ಮಾನವ ಸರಪಳಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇಡೀ ಸೌರವ್ಯೂಹದಲ್ಲಿ ಅತ್ಯಂತ ಸುಂದರವಾದ ಗ್ರಹ ಭೂಮಿ. ಮನುಷ್ಯಕುಲಕ್ಕೆ ಲಕ್ಷಾಂತರ ವರ್ಷಗಳಿಂದ ಆಶ್ರಯ ನೀಡಿರುವ ಜೀವಂತ ನೆಲೆ. ಆದರೆ ಇಂದು ಮನುಷ್ಯನ ಸ್ವಯಂಕೃತಾಪರಾಧದ ಕಾರಣದಿಂದ ಈ ವಿಶ್ವಕ್ಕೆ ಕಂಟಕ ಒದಗಿದೆ. ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿರುವ ವಿಶ್ವ, ಮೂರನೇ ಮಹಾಯುದ್ಧದ ಭೀತಿಯಿಂದ ನಲುಗುತ್ತಿದೆ ಎಂದರು.
ಒಂದು ಕಡೆ ಭಯೋತ್ಪಾದನೆ, ಮತ್ತೊಂದು ಕಡೆ ರಾಸಾಯನಿಕ ಅಸ್ತ್ರಗಳ ಪ್ರಯೋಗ, ಮತ್ತೊಂದು ಕಡೆ ಅಣ್ವಸ್ತ್ರ ಭೀತಿಯಿಂದ ಮನುಷ್ಯ ಕುಲ ಅಪಾಯದ ಅಂಚಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ವಿಶ್ವಶಾಂತಿಯ ಸಂದೇಶ ಜಗತ್ತಿನ ಎಲ್ಲ ಮನುಜರ ಹೃದಯ ತಲುಪಬೇಕಿದೆ. ಪದವಿ ಕಾಲೋಜೊಂದು ವಿಶ್ವಶಾಂತಿಯ ಬಗೆಗೆ ತೋರುತ್ತಿರುವ ಕಾಳಜಿ ಅಭಿನಂದನೀಯ ಎಂದು ಹೇಳಿದರು.
ಕನ್ನಡ ಪ್ರಾಧ್ಯಾಪಕ ಡಾ.ಡಿ. ಶ್ರೀನಿವಾಸ ಮಾತನಾಡಿ, ಮಾನವ ಸರ್ವಾಧಿಕಾರ ಮತ್ತು ದುರಾಸೆಯ ಪ್ರತಿಫಲವಾಗಿ ಎರಡು ಅಣುಬಾಂಬ್ ಪ್ರಯೋಗದ ಪರಿಣಾಮದಿಂದ ಈ ಜಗತ್ತು ಇನ್ನೂ ಹೊರಬಂದಿಲ್ಲ. ಅದರೆ ಇಂದು ಇಡೀ ವಿಶ್ವವನ್ನು ಹಲವಾರು ಬಾರಿ ನಾಶ ಮಾಡಬಲ್ಲ ಸಾವಿರಾರು ಅಣುಬಾಂಬ್‌ಗಳನ್ನು ಅನೇಕ ದೇಶಗಳು ತಯಾರಿಸಿವೆ. ಇವುಗಳಿಂದ ಈ ಪ್ರಪಂಚವನ್ನು ರಕ್ಷಿಸುವುದು ಇಂದಿನ ಸವಾಲಾಗಿದೆ. ಮನುಷ್ಯ ತಾನೇ ಹೊತ್ತಿಸಿರುವ ಅಗ್ನಿಕುಂಡ ಇದು. ಇದರಿಂದ ಹೊರಬಂದು ಈ ಭೂಮಿಯನ್ನು ರಕ್ಷಿಸುವ ಹೊಣೆಯನ್ನು ಇಂದು ಎಲ್ಲರೂ ಹೊರಬೇಕಿದೆ. ಅದಕ್ಕಾಗಿ ವಿಶ್ವಶಾಂತಿಯ ಸಂದೇಶವನ್ನು ಹರಡಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ, ಯಾವುದೋ ದೇಶಗಳ ನಡುವೆ ನಡೆಯುವ ಯುದ್ಧಕ್ಕೂ ನಮಗೂ ಸಂಬಂಧವಿಲ್ಲ ಎಂದು ನೆಮ್ಮದಿಯಿಂದ ಬದುಕುವ ಕಾಲ ಇದಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಹಿಂಸೆ ಅಥವಾ ಯುದ್ಧ ನಡೆದರೂ ಅದರ ಪರಿಣಾಮ ಇಡೀ ವಿಶ್ವದ ಮೇಲೆ ಆಗುವ ರೀತಿಯಲ್ಲಿ ರಚಿಸಿಕೊಂಡ ಬಲೆಯೊಳಗೆ ನಾವೆಲ್ಲ ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವಿಶ್ವಶಾಂತಿ ದಿನಾಚರಣೆ ನಮ್ಮನ್ನು ಜಾಗೃತಿ ಕಡೆಗೆ ಕರೆದೊಯ್ಯುವಂತಾಗಲಿ ಎಂದು ನುಡಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಮಾದೇಗೌಡ, ಗ್ರಂಥಪಾಲಕ ಎನ್. ಮಂಜುನಾಥ್, ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಂಪ್ರಿಯ, ಸಮಾಜಶಾಸ್ತ್ರ ಉಪನ್ಯಾಸಕ ಸಿ.ಕೆ ಹರಿಪ್ರಸಾದ್, ಇತಿಹಾಸ ಉಪನ್ಯಾಸಕ ರಾಮಚಂದ್ರ ವಿಶ್ವಶಾಂತಿಯ ಮಹತ್ವ ಕುರಿತು ಮಾತನಾಡಿದರು. ಕಾಲೇಜಿನ ಎಲ್ಲ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿಶ್ವಶಾಂತಿಯ ಸಂದೇಶದೊಡನೆ ಜಾಥಾ ನಡೆಸಿ, ಮಾನವ ಸರಪಳಿಯನ್ನು ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು.