'ವೈಜ್ಞಾನಿಕ ಮನೋಭಾವದಿಂದ ಹೊಸ ಅನ್ವೇಷಣೆಗೆ ಮುಂದಾಗಿ'
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳುವ ಮೂಲಕ ನಿತ್ಯವೂ ಹೊಸ ಹೊಸ ಅನ್ವೇಷಣೆಗಳೆಡೆಗೆ ತಮ್ಮನ್ನು ಒಡ್ಡಿಕೊಳ್ಳುವಂತೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಇದೇ ಮೊದಲ ಬಾರಿಗೆ ಕಾಲೇಜಿನ ನಾವಿನ್ಯ ಕೂಟದಡಿಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಿರಂತರ ಪ್ರಯೋಗಾತ್ಮಕ ದೃಷ್ಟಿಯನ್ನು ಮನದಲ್ಲಿರಿಸಿಕೊಳ್ಳುವ ಮೂಲಕ ಹೊಸ ಆವಿಷ್ಕಾರಗಳೆಡೆಗೆ ಸಾಗುವಂತೆ ಕಿವಿಮಾತು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನಗಳು ಬಹಳಷ್ಟು ಮುಂದುವರೆದಿರುವ ಯುಗದಲ್ಲಿರುವ ನಾವುಗಳು 50 ವರ್ಷಗಳ ಹಿಂದೆ ಮೊಬೈಲ್ ಹಾಗೂ ಕಂಪ್ಯೂಟರ್‌ಗಳ ಬಗ್ಗೆ ಅಂದಿನ ದಿನಗಳಲ್ಲಿ ಅಷ್ಟಾಗಿ ಅರಿವು ಹಾಗೂ ಚಿಂತನೆಗಳಿರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ಮೊಬೈಲ್, ಕಂಪ್ಯೂಟರ್‌ಗಳಿಲ್ಲದೆ ಜೀವನವೇ ಇಲ್ಲ ಎನ್ನುವ ಸ್ಥಿತಿ ತಲುಪಿದ್ದೇವೆ ಎಂದ ಅವರು, ಮುಂದಿನ 50 ವರ್ಷಗಳಲ್ಲಿ ವಿಜ್ಞಾನ ಇನ್ನೆಷ್ಟು ಮುಂದುವರೆಯಬಲ್ಲದು ಎಂಬುದನ್ನು ಊಹಿಸುವುದೂ ಅಸಾಧ್ಯದ ಸಂಗತಿಯಾಗಿದೆ ಎಂದರು. ವಿಜ್ಞಾನ ಅವಿಷ್ಕಾರಗಳಲ್ಲಿ ಸೋಲುಗಳು ಇದ್ದದ್ದೇ, ಆದರೆ ಅದೇ ಸೋಲು ಮುಂದಿನ ನಮ್ಮ ಯಶಸ್ಸಿನ ಕಥೆ ಹೇಳಬಲ್ಲದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಅವರು, ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಇದೇ ಮೊದಲ ಬಾರಿಗೆ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದಂತೆ ನಾವಿನ್ಯ ಕೂಟವನ್ನು ಆರಂಭಿಸಲಾಗಿದೆ ಎಂದು ನುಡಿದರು.
ಅವಶ್ಯಕತೆ ಅನ್ವೇಷಣೆಯ ತಾಯಿಯಂತೆ. ಅನ್ವೇಷಣೆ ಜ್ಞಾನವೃದ್ಧಿಗೆ ಸಹಕಾರಿ ಎಂದರಲ್ಲದೇ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹೊಸ ಅವಿಷ್ಕಾರಗಳೆಡೆಗೆ ತಮ್ಮನ್ನು ತೆರೆದಿಟ್ಟುಕೊಳ್ಳುವಂತೆ ತಿಳಿಸಿದರು.
ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತಮ್ಮಲ್ಲೇ ಹಲವು ತಂಡಗಳಾಗಿ ರಚಿಸಿಕೊಂಡು ವಿಧ ವಿಧವಾದ ವೈಜ್ಞಾನಿಕ ಮಾದರಿಗಳನ್ನು ತಯಾರಿಸಿ ಅವುಗಳ ವಿವರ ಹಾಗೂ ಮಹತ್ವದ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಂತಿಮ ಬಿಎಸ್ಸಿ ವಿದ್ಯಾರ್ಥಿ ದೀಕ್ಷಿತ್, ಮೋಹನ್, ರಾಕೇಶ್ ಪವನ ಯಂತ್ರದಿಂದ ವಿದ್ಯುತ್ ಉತ್ಪಾದನೆಯ ಮಾದರಿ, ಪ್ರಥಮ ಬಿಎಸ್ಸಿಯ ಚನ್ನಕೇಶವ ತಂಡ ರಾಕೇಟ್ ಹಾಗೂ ಪವರ್ ಜನರೇಟರ್ ಮಾದರಿ, ರಂಜಿತ ಹಾಗೂ ಲತಾ ಚೌಧರಿ ತಂಡ ಹೈಡ್ರಾಲಿಕ್ ಆರ್ಮಾ ಮಾದರಿ, ಸಂತೋಷ್‌ಕುಮಾರ್ ತಂಡ ಕರೆಂಟ್ ಪಾಸಿಂಗ್ ಥ್ರೋ ಗ್ರಾಫೈಟ್ ಅಂಡ್ ಕಾಯಿನ್ ಎಂಬ ವಿಜ್ಞಾನ ಮಾದರಿ, ಸಂಧ್ಯಾ ಹಾಗೂ ವಿದ್ಯಾಲಕ್ಷ್ಮೀ ತಂಡ ಕಂಡಕ್ಟರ್ ಮಾದರಿ, ಶ್ರೀಜ ಹಾಗೂ ರಮ್ಯ ತಂಡವು ಎಲೆಕ್ಟ್ರಿಕಲ್ ಪ್ರಾಪರ್ಟಿ ಎಂಬ ಮಾದರಿಗಳನ್ನು ತಯಾರಿಸಿ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಪೂರ್ಣಿಮ ಕೆಲವು ಮಾಹಿತಿ ನೀಡಿದರು. ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಅರುಂಧತಿ, ಪ್ರಾಧ್ಯಾಪಕ ನಟೇಶ್ ಇತರರು ಇದ್ದರು.