'ಆಯುರ್ವೇದ ಶ್ರೇಷ್ಠ ವೈದ್ಯ ಪದ್ಧತಿ'
ಕ.ಪ್ರ.ವಾರ್ತೆ ಹೊಳೆನರಸೀಪುರ ಸೆ.24
ಆಯುರ್ವೇದ ಅನಾದಿ ಕಾಲದಿಂದಲೂ ಜಾಲ್ತಿಯಲ್ಲಿರುವ ಉತ್ತಮ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ಹಿಂದಿನಿಂದಲೂ ಎಲ್ಲೆಡೆ ಜನಪ್ರಿಯತೆ ಉಳಿಸಿಕೊಂಡಿರುವ ವೈದ್ಯ ಪದ್ಧತಿಯಾಗಿದೆ ಎಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್.ಸರೋಜಿನಿದೇವಿ ತಿಳಿಸಿದರು.
ಅವರು ಪಟ್ಟಣದ ಆಯುರ್ವೇದ ಆಸ್ಪತ್ರೆಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆಯುಷ್ ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇದ್ದಕ್ಕಿದ್ದಂತೆಯೇ ರೋಗ ನಿವಾರಣೆಯಾಗುವಂಥ ಯಾವುದೇ ಚಿಕಿತ್ಸಾ ಪದ್ಧತಿಯೂ ಇಲ್ಲ, ಆದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ತಡವಾದರೂ ಶಾಶ್ವತ ಉಪಶಮನ ನೀಡುವ ಶಕ್ತಿ ಆಯುರ್ವೇದಕ್ಕಿದೆ ಎಂದು ಅವರು ಹೇಳಿದರು. ಸರ್ಕಾರ ಆಯುರ್ವೇದವನ್ನು ಹೆಚ್ಚು ಹೆಚ್ಚಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ರೀತಿಯ ಉಚಿತ ಆಯುಷ್ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತಿದೆ. ಆರೋಗ್ಯವೆಂಬುದು ಮನೆ ಬಾಗಿಲಿಗೆ ಬಂದಿರುವ ಸಮಯದಲ್ಲಿ ಇಂತಹ ಅಪರೂಪದ ಚಿಕಿತ್ಸಾ ಪದ್ಧತಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಆಯುಷ್ ಚಿಕಿತ್ಸಾ ಶಿಬಿರ ಕುರಿತು ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿ ಮಹತ್ವ ಕುರಿತಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಷ್ಪಲತ ಮಾತನಾಡಿ, ಆಯುರ್ವೇದ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ರಾಜ ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಈ ಪದ್ಧತಿಗೆ ಮನ್ನಣೆ ಇದೆಯಲ್ಲದೇ, ಹಿಂದಿನ ಕಾಲದಲ್ಲಿ ಈ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬಳಸುತ್ತಿದ್ದರು ಎಂದು ತಿಳಿಸಿದರು. ಆದರೆ ಕ್ರಮೇಣ ಭಾರತ ಪರಕೀಯರ ಆಳ್ವಿಕೆಯಿಂದ ನಲುಗಿ ಹೋಗಿ ಸ್ವಾತಂತ್ರ್ಯಾನಂತರದಲ್ಲಿ ಇಂಗ್ಲಿಷ್ ಔಷಧಿಗಳ ಹಾವಳಿಯಿಂದಾಗಿ ಈ ಪದ್ಧತಿಯು ಅವನತಿಯತ್ತ ಸಾಗಿತು ಎಂದು ವಿಷಾದಿಸಿದರು. 1990ರಿಂದೀಚೆಗೆ ಭಾರತದ ಎಲ್ಲಾ ಕಡೆಗಳಲ್ಲಿಯೂ ಆಯುರ್ವೇದ ವೈದ್ಯ ಪದ್ಧತಿಯು ಕ್ರಮೇಣ ತನ್ನ ಉತ್ತಮ ಗುಣಗಳಿಂದಾಗಿ ಇಂಗ್ಲಿಷ್ ವೈದ್ಯ ಪದ್ಧತಿಗೆ ಸರಿಸಮನಾಗಿ ಪ್ರಬುದ್ಧಮಾನಕ್ಕೆ ಬರತೊಡಗಿತು ಎಂದು ಡಾ.ಪುಷ್ಪಲತ ವಿವರಿಸಿದರು.
ಈ ನಿಟ್ಟಿನಲ್ಲಿ ಆಯುರ್ವೇದದ ಮಹತ್ವವನ್ನು ಮನಗಂಡ ಸರ್ಕಾರಗಳು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಹೆಚ್ಚಾಗಿ ಜನಪ್ರಿಯಗೊಳಿಸಿತು ಎಂದರು. ಆಯುರ್ವೇದ ದಿನೇ ದಿನೇ ಹೆಚ್ಚು ಹೆಚ್ಚಾಗಿ ಜನಪ್ರಿಯಗೊಳ್ಳುತ್ತಿರುವ ಕಾರಣ ರಾಜ್ಯ ಸರ್ಕಾರವು ಹಾಸನ ಜಿಲ್ಲೆಯಲ್ಲಿಯೇ ಒಟ್ಟು 62 ಆಯುಷ್ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದ ಡಾ.ಪುಷ್ಪಲತ, ಇತ್ತೀಚೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಯುಷ್ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಪಟ್ಟಣದಲ್ಲಿನ ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯವಿರುವ ಉನ್ನತ ಮಟ್ಟದ ಚಿಕಿತ್ಸಾ ಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ ಶಿಬಿರ ಉದ್ಘಾಟಿಸಿ ಶುಭಕೋರಿದರು. ಜಿಪಂ ಸದಸ್ಯೆ ಗೌರಮ್ಮ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್, ಆಯುಷ್ ವೈದ್ಯ ಡಾ.ರಾಘವೇಂದ್ರ, ಡಾ.ಮೂಸಾಬೇರಿ, ಡಾ.ಹೇಮವಾಣಿ, ಡಾ.ಜಯಂತ್, ಡಾ.ನಮ್ರತ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್.ಲಕ್ಷ್ಮೀಕಾಂತ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.