ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯಲ್ಲಿ 10 ಸಾವಿರ ಪ್ರಕರಣ ಇತ್ಯರ್ಥ ಗುರಿ

Srinivasa Murthy VN
Updated On : 24 Sept 2013, 11:39 am

ಕನ್ನಡಪ್ರಭ ವಾರ್ತೆ ಹಾಸನ ಸೆ. 24
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸೆ.23ರಿಂದ ನ.23ರವರೆಗೆ ಮೆಗಾ ಲೋಕ ಅದಾಲತ್ ನಡೆಯುತ್ತಿದ್ದು, ಹೆಚ್ಚು ಪ್ರಕರಣಗಳ ಇತ್ಯರ್ಥಕ್ಕೆ ವಕೀಲರು ಸಹಕಾರ ನೀಡುವುದರ ಮೂಲಕ ಅದಾಲತ್‌ನ್ನು ಯಶಸ್ವಿಗೊಳಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ಕರೆ ನೀಡಿದರು.
  ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ಮೆಗಾ ಲೋಕ ಅದಾಲತ್ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ 15 ಲಕ್ಷದಷ್ಟು ಪ್ರಕರಣ ಇತ್ಯರ್ಥಕ್ಕೆ ಗುರಿ ನಿಗಧಿಪಡಿಸಿದ್ದು, ಜಿಲ್ಲೆಯಲ್ಲಿ ಹತ್ತು ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿಗದಿಪಡಿಸಲಾಗಿದೆ.
 ವಕೀಲರು ಕಕ್ಷಿದಾರರ ಮನಮೊಲಿಸಿ ಪ್ರಕರಣ ಇತ್ಯರ್ಥಗೊಳಿಸುವಂತೆ ತಿಳಿಸಿದರು.
ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದು ಇವುಗಳ ಇತ್ಯರ್ಥಕ್ಕೆ ವಿಮಾ ಕಂಪನಿಯವರ ಸಹಕಾರ ಪಡೆಯುವಂತೆ ತಿಳಿಸಿ, ಅಂಗವಿಕಲತೆಯನ್ನು ದೃಢಪಡಿಸಲು ಮೂಳೆ ತಜ್ಞರ ನೆರವು ಪಡೆಯಲಾಗುವುದು. ನ್ಯಾಯ ತೀರ್ಮಾನಕ್ಕಾಗಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ವಿಮಾ ಕಂಪನಿಗಳು ಕೈಜೋಡಿಸುವಂತೆ ಹೇಳಿದರು. ಪ್ರತಿ ವಿಮಾ ಕಂಪನಿಗಳು ನಿಗಧಿಪಡಿಸಿದ ದಿನಾಂಕದಂದು ಹಾಜರಾಗಿ ಸಹಕಾರ ನೀಡುವಂತೆ ಕೋರಿದರು.
 ಜನರಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕರಣಗಳನ್ನು ಸಂಧಾನ ಮೂಲಕ ಪರಿಹರಿಸಲು ಸಹಕರಿಸುವಂತೆ ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿಗಳಿಗೆ ಸೂಚಿಸಿದರು.
 ನ್ಯಾ. ಆರ್.ಡಿ. ಹುದಾರ್ ಮಾತನಾಡಿ, ರಾಜಿ ಸಂಧಾನದ ಮೂಲಕ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದರೆ ನ್ಯಾಯಾಲಯದಲ್ಲಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ವಕೀಲರು ತಮ್ಮಲ್ಲಿರುವ ಮೊಕದ್ದಮೆಗಳಲ್ಲಿ ಶೇ.50ರಷ್ಟನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸುವ ಮೂಲಕ ಕಕ್ಷಿದಾರರಿಗೆ ನ್ಯಾಯ ದೊರಕಿಸುವಂತೆ ಹೇಳಿದರು.
 ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜ್ ಮಾತನಾಡಿ, ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕಕ್ಷಿದಾರರನ್ನು ಕಡ್ಡಾಯವಾಗಿ ಕರೆತರುವುದರ ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ  ವಕೀಲರು ಹಾಜರಾಗಿ ಅತಿ ಹೆಚ್ಚು ಪ್ರಕರಣ ಇತ್ಯರ್ಥಪಡಿಸುವ  ಮೂಲಕ ರಾಜ್ಯದಲ್ಲಿಯೇ ಮೊದಲ ಜಿಲ್ಲೆಯಾಗಬೇಕು ಎಂದರು.
  ನ್ಯಾಯಾಧೀಶ ಎಚ್.ಜಿ.ವಿಜಯಕುಮಾರ್, ಬಿ.ಜಯಂತ್‌ಕುಮಾರ್, ಉಪ ವಿಭಾಗಾಧಿಕಾರಿ ಶರತ್ ಮತ್ತಿತರರು ಉಪಸ್ಥಿತರಿದ್ದರು. ನಾನಾ ವಿಮಾ ಕಂಪನಿಯ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ ಅಧಿಕಾರಿ ಹಾಗೂ ವಕೀಲರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement