ಜಿಲ್ಲೆಯಲ್ಲಿ ಹೆಚ್ಚಿದ ಕಾಡಾನೆ ಉಪಟಳ
-ಪಿ.ರವಿಕುಮಾರ್
ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಅಧಿಕಗೊಂಡಿದ್ದು, ಕಾಡಾನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಈ ಸಂಬಂಧವಾಗಿ ಸರ್ಕಾರವಾಗಲೀ, ಅರಣ್ಯ ಇಲಾಖೆಯಾಗಲೀ ಸೂಕ್ತ ಕ್ರಮಕೈಗೊಳ್ಳದ ಪರಿಣಾಮ ಪರಿಸ್ಥಿತಿ ಬಿಗಡಾಯಿಸಿದೆ.
1974ರಿಂದ 1982ರಲ್ಲಿ ಹಾರಂಗಿ ಮತ್ತು ಹೇಮಾವತಿ ಜಲಾಶಯಕ್ಕೆ ಅಣೆಕಟ್ಟನ್ನು ನಿರ್ಮಿಸಿದ ಪರಿಣಾಮ ಹಿನ್ನೀರಿನಲ್ಲಿ ಆನೆಗಳ ವಲಸೆ ಮಾರ್ಗ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿ, ನೀರನ್ನು ದಾಟಲು ಸಾಧ್ಯವಾಗದ ಕಾರಣ ಕಾಡಾನೆಗಳು ಕಾಡು ಬಿಟ್ಟು ನಾಡಿನತ್ತ ಲಗ್ಗೆ ಇಡುತ್ತಿವೆ.
ಜಿಲ್ಲೆಯ ಕಾಡಾನೆಗಳ ಪ್ರದೇಶಗಳಾದ ಸಕಲೇಶಪುರ, ಅರಕಲಗೂಡು ಮತ್ತು ಆಲೂರು ತಾಲೂಕಿನಲ್ಲಿ ಸುಮಾರು 23 ರಿಂದ 25 ಕಾಡಾನೆಗಳು ಸದ್ಯ ಬೀಡು ಬಿಟ್ಟಿದ್ದ ಕಾಡಾನೆಗಳ ಸಂಖ್ಯೆ ಪ್ರಸ್ತುತ 50ರ ಗಡಿ ದಾಟಿದೆ. ಇದರಿಂದ ಈ ಭಾಗದ ಜನರು ಕಾಡಾನೆಗಳು ಯಾವ ಸಂದರ್ಭದಲ್ಲಿ ದಾಳಿ ಮಾಡುತ್ತವೋ ಎಂಬ ಭಯದಿಂದ ಪ್ರಾಣ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿದ್ದಾರೆ.
ಕಾಡಾನೆಗಳ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳುವ ಬದಲಾಗಿ ಕಾಡಂಚಿನ ಜನರು ಅರಣ್ಯವನ್ನು ಒತ್ತುವರಿ ಮಾಡುತ್ತಿರುವುದರಿಂದ ಕಾಡಾನೆಗಳ ದಾಳಿ ಹೆಚ್ಚಾಗಿದೆ ಎಂದು ಜಪಿಸುತ್ತಾ ಕೇವಲ ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತಿದೆ.
ಅರಣ್ಯ ಪ್ರದೇಶಗಳಲ್ಲಿ ಜಲ ವಿದ್ಯುತ್ ಯೋಜನೆ ಸೇರಿದಂತೆ ನಾನಾ ಯೋಜನೆಗಳಿಗೆ ಅನುಮತಿ ನೀಡುವುದು, ರಕ್ಷಿತ ಅರಣ್ಯ ಸೇರಿದಂತೆ ಅನೇಕ ಕಾಡುಗಳಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು ಅರಣ್ಯ ನಾಶ ಮಾಡುತ್ತಿರುವುದು ಹಾಗೂ ಅರಣ್ಯದಲ್ಲಿ ಕಾಡಾನೆಗಳ ಪ್ರಮುಖ ಆಹಾರವಾದ ಬಿದಿರು ಮರಗಳ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಕಾಡಾನೆಗಳ ಸಮಸ್ಯೆ ಹೆಚ್ಚಾಗಿ ಮಾನವನ ಮೇಲೆ ದಾಳಿ ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಿದೆ.
ಕಾಡನ್ನು ಮನುಷ್ಯರು ಒತ್ತುವರಿ ಮಾಡಿಕೊಂಡಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಇದನ್ನು ಮನಗಂಡ ಜನರು ಒತ್ತುವರಿಯಾಗಿರುವ ಅರಣ್ಯ ಪ್ರದೇಶಗಳನ್ನು ಸರ್ಕಾರಕ್ಕೆ ನೀಡಲು ಮುಂದಾಗಿದ್ದರೂ ಕಾಡನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಸಹ ಸರ್ಕಾರ ನಿರ್ವಹಿಸುತ್ತಿಲ್ಲ. ಇದರಿಂದ ಕಾಡಂಚಿನಲ್ಲಿ ಕಾಡು ಒತ್ತುವರಿ ಕಾರ್ಯಗಳು ಪ್ರಸ್ತುತದವರೆಗೂ ಅವಿರತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಆರಣ್ಯದಲ್ಲಿ ಆನೆಗಳಿಗೆ ಸರಿಯಾಗಿ ಆಹಾರ ಸಿಗದ ಕಾರಣ ಮತ್ತು ಜಲ ವಿದ್ಯುತ್ ಯೋಜನೆ ಕಾಮಗಾರಿಯಿಂದ ಉಂಟಾಗುವ ಶಬ್ಧದಿಂದ ಕಾಡಾನೆಗಳು ನಾಡಿನಲ್ಲಿ ದಾಳಿ ಮಾಡುತ್ತಿವೆ. ಅರಣ್ಯ ನಾಶದಿಂದ ಕಾಡಾನೆಗಳು ಅರಣ್ಯ ಸುತ್ತಮುತ್ತಲಿನ ಪ್ರದೇಶಗಳಿಗೆ ದಾಳಿ ಮಾಡುವುದಷ್ಟಲ್ಲದೆ ದೂರದ ದೊಡ್ಡ ದೊಡ್ಡ ನಗರಗಳಿಗೂ ದಾಳಿ ಮಾಡುವ ಪ್ರಸಂಗ ನಿರ್ಮಾಣವಾಗಿದೆ.
ನಗರಗಳಿಗೆ ಕೇವಲ ಕಾಡಾನೆ ಮಾತ್ರವಲ್ಲದೆ ಚಿರತೆ, ಕರಡಿ ಹಾಗೂ ಇತರೆ ಕಾಡುಪ್ರಾಣಿಗಳು ಜನಭರಿತ ಪ್ರದೇಶಗಳಿಗೆ ದಾಳಿ ಮಾಡುತ್ತಿವೆ. ಆಲೂರು, ಸಕಲೇಶಪುರ, ಯಸಳೂರು, ಹೆತ್ತೂರು ಮತ್ತು ಅರಕಲಗೂಡು ಅರಣ್ಯದಲ್ಲಿ ಬೀಡು ಬಿಟ್ಟಿರುವಂತಹ ಆನೆಗಳಿಗೆ ಈ ರಕ್ಷಿತಾರಣ್ಯ ಪ್ರದೇಶವು ಸಾಕಾಗದ ಕಾರಣ ಆನೆ ಮತ್ತು ಮನುಷ್ಯನ ನಡುವೆ ಸಂಘರ್ಷ ಉಂಟಾಗಿ ಮನುಷ್ಯನ ಪ್ರಾಣ ಹಾನಿ ಮತ್ತು ಬೆಳೆ ನಾಶಗಳು ಉಂಟಾಗುತ್ತಿದೆ.
ಕಾಡಂಚಿನ ಪ್ರದೇಶಗಳಿಗೆ ಆನೆಗಳು ದಾಳಿ ಮಾಡಲು ಮತ್ತೊಂದು ಕಾರಣವೆಂದರೆ ಕಾಡಂಚಿನ ಪ್ರದೇಶದಲ್ಲಿ ಅಕ್ರಮವಾಗಿ ಕಳ್ಳಬಟ್ಟಿಯನ್ನು ತಯಾರಿಸುತ್ತಿರುವುದರಿಂದ ಅದರ ವಾಸನೆ ಹಾಗೂ ಕಳ್ಳಬಟ್ಟಿ ಸೇವನೆಗೆ ಒಳಗಾಗಿ ಆನೆಗಳು ಅದನ್ನು ಹುಡುಕಿಕೊಂಡು ಜಮೀನು ಮತ್ತು ತೋಟಗಳಿಗೆ ನುಗ್ಗುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.