ತಾಪಂ ಇಓ ನಡವಳಿಕೆ ಖಂಡಿಸಿ ಸಭಾತ್ಯಾಗ
ಹೊಳೆನರಸೀಪುರ: ವಿನಾಕಾರಣ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಅನಾಗರಿಕವಾಗಿ ವರ್ತಿಸಿ, ತುಚ್ಛವಾಗಿ ಮಾತನಾಡಿದ ಇಲ್ಲಿನ ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡರ ವರ್ತನೆ ಖಂಡಿಸಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಸಭೆಯಿಂದ ಹೊರನಡೆದ ಘಟನೆ ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆದಿದೆ.
ತಾಪಂ ಸಭಾಂಗಣದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಭಾಗವಹಿಸಬೇಕಿತ್ತು. ಆದರೆ ತಮ್ಮಣ್ಣಗೌಡ ಬೆಳಗ್ಗೆ 10 ಕ್ಕೆ ಸಭೆಗೆ ಬಾರದೆ ಮಧ್ಯಾಹ್ನ 12ರ ನಂತರ ಸ್ಥಳಕ್ಕೆ ಆಗಮಿಸಿದರು.
ಆಗ ಸಭಾಂಗಣದ ಹೊರ ನಿಂತಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು ಕಂಡವರೇ, ವೇದಿಕೆ ಬಳಿ ಬಂದು ಏಕಾಏಕಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಎಗರಾಡಿದ್ದಲ್ಲದೆ, ಮಾಹಿತಿ ಕೊಡಲು ಬಂದಿದ್ದವರಿಗೆ ಏಕವಚನದಿಂದ ಸಂಬೋಧಿಸಿದರು.
ಅಲ್ಲದೇ ಮಾಹಿತಿ ನೀಡದ ಸಿಡಿಪಿಓ ಅವರನ್ನೂ ಮೊಬೈಲ್ನಲ್ಲಿ ಏಕವಚನದಿಂದ ನೀನು ಕತ್ತೆ ಕಾಯಲು ಲಾಯಕ್ಕು, ನಿನ್ನಂತ ಅಧಿಕಾರಿಯಿಂದ ಏನೂ ಪ್ರಯೋಜನವಿಲ್ಲ ಎಂದು ಗದರಿಸಿದರೆಂದು ಸ್ಥಳದಲ್ಲೇ ಇದ್ದ ಅಂಗನವಾಡಿ ಕಾರ್ಯಕರ್ತೆಯರ ಆರೋಪವಾಗಿದೆ. ಇಓ ತಮ್ಮಣ್ಣಗೌಡ ವರ್ತನೆಯಿಂದ ಬೇಸತ್ತ ಕಾರ್ಯಕರ್ತೆಯರು ಸಭೆಯಿಂದ ಹೊರಬಂದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಸಭೆಯಿಂದ ಹೊರಬಂದ ಕಾರ್ಯಕರ್ತೆಯರ ಪ್ರಕಾರ ಬೆಳಗ್ಗೆ 10ಕ್ಕೆ ಮಾಹಿತಿ ಸಭೆ ಇದೆ ಎಂದು ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಸಭಾಂಗಂಣದಲ್ಲಿ ಸೇರಿದ್ದಾರೆ. ಆದರೆ ಕಿರಿದಾದ ಸಭಾಂಗಣ ನೂರು ಮಂದಿ ಕೂರಲು ಸಹಾ ಅವಕಾಶ ಇಲ್ಲದ ಕಾರಣ, ಉಳಿದವರು ಸಭಾಂಗಣದಿಂದ ಹೊರಗಡೆ ಕಟ್ಟಡದ ಅಕ್ಕಪಕ್ಕ ನಿಂತಿದ್ದರು. ಇದನ್ನು ಗಮನಿಸಿದ ಇಓ ತಮ್ಮಣ್ಣಗೌಡ ಸಭಾಂಗಣಕ್ಕೆ ಆಗಮಿಸಿ ಏಕಾಏಕಿ ಮಹಿಳೆಯರು ಎನ್ನುವುದನ್ನೂ ನೋಡದೇ ಅನಾಗರಿಕರಂತೆ ಮಾತನಾಡಿದ್ದು ಸರಿಯಲ್ಲ ಎಂಬುದು ಕಾರ್ಯಕರ್ತೆಯರ ಆರೋಪ.
ಈ ಘಟನೆ ನಂತರ ಕಾರ್ಯಕರ್ತೆಯರು ಸಭಾಂಗಣದಿಂದ ಹೊರಬಂದು ಪ್ರತಿಭಟನೆ ವ್ಯಕ್ತಪಡಿಸಿದ್ದಲ್ಲದೆ, ಮಾಧ್ಯಮದವರ ಗಮನಕ್ಕೆ ಈ ವಿಷಯವನ್ನು ತರಲು ಮುಂದಾದಾಗ, ಕೂಡಲೇ ಎಚ್ಚೆತ್ತ ಇಓ ತಮ್ಮಣ್ಣಗೌಡ ಕಾರ್ಯಕರ್ತೆಯರಲ್ಲಿ ಕೆಲವರನ್ನು ಕಚೇರಿಗೆ ಕರೆಸಿಕೊಂಡು ತಮ್ಮ ವರ್ತನೆಯಿಂದ ಬೇಸರವಾಗಿದ್ದಲ್ಲಿ ಅನ್ಯತಾ ಭಾವಿಸದೆ, ಕ್ಷಮಿಸುವಂತೆ ಕೇಳಿದರೆಂದು ಕಾರ್ಯಕರ್ತೆಯರು ತಿಳಿಸಿದರು. ಆದರೂ ಸಹ ಬಹಳಷ್ಟು ಕಾರ್ಯಕರ್ತೆಯರ ಪ್ರಕಾರ ಎಲ್ಲ ಮುಗಿದ ಮೇಲೆ ಕಚೇರಿಯಲ್ಲಿ ತಪ್ಪಾಯಿತೆಂದು ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ವಿಷಯ ತಿಳಿದ ತಾಲೂಕು ಅಂಗನವಾಗಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವಿ.ಲತಾ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟೊತ್ತಿಗೆ ಬಹುತೇಕ ಕಾರ್ಯಕರ್ತೆಯರು ಸಭಾಂಗಣದಿಂದ ಹೊರ ಹೋಗಿದ್ದರಿಂದ ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಸ್ಥಳದಲ್ಲಿ ಹಾಜರಿದ್ದು ತಾಪಂ ಇಓ ತಮ್ಮಣ್ಣಗೌಡ ನಡವಳಿಕೆ ವಿರುದ್ಧ ಅಸಮಾಧಾನ ತೋಡಿಕೊಂಡರು.
ಈ ಬಗ್ಗೆ ಅಧ್ಯಕ್ಷೆ ವಿ.ಲತಾ ಅವರು ಇಓ ತಮ್ಮಣ್ಣಗೌಡ ಅವರನ್ನು ಭೇಟಿ ಮಾಡಿ ಘಟನೆಗೆ ಕಾರಣ ಮತ್ತು ಸಮಜಾಯಿಷಿ ಕೋರಿದ್ದರಿಂದ ತಮ್ಮಣ್ಣಗೌಡ ಯಾವ ಘಟನೆ ನಡೆದೇ ಇಲ್ಲ ಎಂಬಂತೆ ನಡೆದುಕೊಂಡರೆಂದು ಸುದ್ದಿಗಾರರಿಗೆ ಹೇಳಿದರು. ಈ ಬಗ್ಗೆ ತಾವು ಜಿಲ್ಲಾ ಮತ್ತು ರಾಜ್ಯ ಸಂಘಕ್ಕೆ ಮಾಹಿತಿ ನೀಡಿ ನಂತರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದರು.