ದೇಶದ ಆರ್ಥಿಕತೆಗೆ ರಾಷ್ಟ್ರೀಯ ಬ್ಯಾಂಕ್‌ಗಳ ಪಾತ್ರ ಮಹತ್ವಪೂರ್ಣ: ಡಿಸಿ
ಕನ್ನಡಪ್ರಭ ವಾರ್ತೆ ಹಾಸನ ಸೆ. 24
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾತ್ರ ಬಹಳ ಮಹತ್ವವಾದದ್ದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಹೇಳಿದರು.
ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಮಂಗಳವಾರ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ ಹಾಗೂ ಜಂಟಿ ಬಾಧ್ಯತಾ ಸಮಿತಿಗಳಿಗೆ ಸಾಲ ವಿತರಿಸಲು ಏರ್ಪಡಿಸಿದ್ದ ಸಾಲ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಾಗಿ ಕೋಟ್ಯಂತರ ಮಂದಿ ತಮ್ಮ ಸ್ವಾವಲಂಬಿ ಬದುಕು ಕಂಡುಕೊಂಡಿದ್ದಾರೆ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅದು ಅವರಿಗೆ ವರದಾನವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ ಸೇರಿದಂತೆ ದೇಶದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಕೃಷಿ ಕೈಗಾರಿಕೆ, ಶಿಕ್ಷಣ, ವ್ಯಾಪಾರ ಎಲ್ಲಾ ವರ್ಗಗಳಿಗೂ ಸಾಲ ಸೌಲಭ್ಯವನ್ನು ನೀಡುತ್ತಾ ಎಲ್ಲರ ಆರ್ಥಿಕ ಪ್ರಗತಿಗೆ ನೆರವಾಗುತ್ತಿದೆ. ಆದರೆ ಸಮಾಜದಲ್ಲಿ ಇನ್ನೂ ಬ್ಯಾಂಕಿಂಗ್ ಸೌಲಭ್ಯಗಳು ತಲುಪದೇ ಇರುವ ಸಾವಿರಾರು ಮಂದಿ ಇದ್ದಾರೆ. ಅವರಿಗೂ ದೊರೆಯಬೇಕು ಅವರ ಜೀವನ ಮಟ್ಟವೂ ಸುಧಾರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಬ್ಯಾಂಕ್‌ಗಳು ಇಷ್ಟು ಜನರಿಗೆ ಸಾಲ ಸೌಲಭ್ಯ ನೀಡಿವೆ ಎಂಬುದು ಎಷ್ಟು ಮುಖ್ಯವೋ, ಸಿಗದೇ ಇರುವ ಅರ್ಹರಿಗೆ ಅದನ್ನು ತಲುಪಿಸುವ ಹೊಣೆಗಾರಿಕೆಯನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಂದು ಸಲಹೆ ಮಾಡಿದರು.
ಸಣ್ಣಪುಟ್ಟ ಸಾಲಗಳಿಗೆ ಜಾಮೀನುದಾರರಿಗಾಗಿ ಒತ್ತಾಯ ಹೇರಬೇಡಿ. ಶಿಕ್ಷಣಕ್ಕೆ ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಯಾರು ಯಾರು ಬ್ಯಾಂಕಿನಿಂದ ಸಾಲ ಪಡೆದಿದ್ದಾರೆಂದು ಬ್ಯಾಂಕಿನಲ್ಲಿ ಪ್ರಕಟಿಸಿ ಇದು ಇನ್ನಿತರರಿಗೂ ಮಾರ್ಗದರ್ಶನ ವಾಗಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಮಾತನಾಡಿ ಜನಸಾಮಾನ್ಯರು, ಕೃಷಿಕರು, ಉನ್ನತ ಶಿಕ್ಷಣದ ಆಸೆ ಹೊಂದಿರುವವರಿಗೆ ಬ್ಯಾಂಕ್ ಹೆಚ್ಚಿನ ಸಾಲ ನೀಡಬೇಕು. ಗ್ಯಾರಂಟಿಗಾಗಿ ಒತ್ತಾಯ ಹೇರಬಾರದೆಂದು ಜಿಪಂ ಸಭೆಗಳಲ್ಲಿ ಬ್ಯಾಂಕಿಂಗ್ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಚರ್ಚಿಸಲಾಗುತ್ತಿದೆ. ಬ್ಯಾಂಕ್ ಸಾಕಷ್ಟು ಸಾಲ ನೀಡುತ್ತಿರುವುದು ಅಭಿನಂದನಾರ್ಹ. ಆದರೂ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಬ್ಯಾಂಕ್‌ಗಳು ಆಸಕ್ತಿ ವಹಿಸಬೇಕು. ನಿಜವಾಗಿ ಸಾಲ ಅಗತ್ಯವಿರುವರನ್ನು ಗುರುತಿಸಬೇಕು. ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.
ಕೆನರಾ ಬ್ಯಾಂಕ್ ಮೈಸೂರು ಪ್ರಾಂತ್ಯ ಉಪ ಪ್ರಧಾನ ವ್ಯವಸ್ಥಾಪಕ ರಾಮಚಂದ್ರ ಅವರು ಮಾತನಾಡಿ ಮೈಸೂರು ವಿಭಾಗದಲ್ಲಿ 131 ಕೆನರಾ ಬ್ಯಾಂಕ್ ಶಾಖೆಗಳಿದ್ದು ಹಾಸನದಲ್ಲಿ ಲೀಡ್ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್ ಪ್ರಾರಂಭಗೊಂಡು 107 ವರ್ಷಗಳಾಗಿದ್ದು ವಿಶ್ವದಾದ್ಯಂತ 4170 ಶಾಖೆಗಳು ಸುಮಾರು 4000 ಎ.ಟಿ.ಎಂ.ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ವಾರ್ಷಿಕ ಏಳು ಕೋಟಿ ಲಕ್ಷ ರು. ವಹಿವಾಟು ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೃಷಿ ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಸಾಲ ಸೌಲಭ್ಯ ನೀಡಲಾಗಿದೆ. ಅದರಂತೆ ಇತರ ಬ್ಯಾಂಕ್‌ಗಳ ಮೂಲಕವೂ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಗಮನ ಹರಿಸಲಾಗುತ್ತಿದೆ ಎಂದು ರಾಮಚಂದ್ರ ಹೇಳಿದರು.
ಇದೇ ವೇಳೆ ಜಿಲ್ಲೆಯಲ್ಲಿ ಮಧ್ಯಮ ಹಾಗೂ ಸಣ್ಣ ಪ್ರಮಾಣದ ಉದ್ದಿಮೆದಾರರ ಸಾಲ ಮೇಳದಲ್ಲಿ 100ಕ್ಕೂ ಅಧಿಕ ಮಂದಿಗೆ 1.25 ಕೋಟಿ ರು ಸಾಲದ ಚೆಕ್ ಫಲಾನುಭವಿಗಳಿಗೆ ವಿತರಿಸಲಾಯಿತು. ಮುಖ್ಯ ವ್ಯವಸ್ಥಾಪಕ ಕೆ. ಮಂಜುನಾಥ ಸ್ವಾಗತಿಸಿದರು.ಹಿರಿಯ ವ್ಯವಸ್ಥಾಪಕ ಸಿ.ಎಸ್. ಶ್ರೀಕಂಠಸ್ವಾಮಿ ನಿರೂಪಿಸಿದರು.