ಪ್ರೇಮ ವೈಫಲ್ಯ ಆತ್ಮಹತ್ಯೆಗೆ ಕಾರಣ: ಡಾ. ನಾರಾಯಣ ಪ್ರಕಾಶ್
ಕ.ಪ್ರ.ವಾರ್ತೆ ಹಾಸನ ಸೆ. 24
ಯುವ ಜನತೆಯಲ್ಲಿ ಪ್ರೇಮ ವೈಫಲ್ಯ ಹೆಚ್ಚಾಗಿ ಆತ್ಮಹತ್ಯೆಗೆ ಕಾರಣವಾಗುತ್ತಿವೆ ಎಂದು ನಗರದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾನಸ ರೋಗದ ವಿಭಾಗ ಪ್ರಾಧ್ಯಾಪಕ ಡಾ.ನಾರಾಯಣ ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಪ್ತ ಸಮಾಲೋಚನಾ ಘಟಕದಿಂದ ಏರ್ಪಡಿಸಿದ್ದ ಉಪನ್ಯಾಸಕರು ಮತ್ತು ತರಗತಿ ಪ್ರತಿನಿಧಿಗಳ ತರಬೇತಿಯಲ್ಲಿ ಮಾತನಾಡಿದ ಅವರು, ಮಾನಸಿಕ ಅಸ್ಥಿರತೆ ಸುಲಭವಾಗಿ ಗೋಚರಿಸುವುದಿಲ್ಲ. ಯುವಕ ಯುವತಿಯರಿಬ್ಬರೂ ವಿಭಿನ್ನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಿದರು.
ಯುವಜನಾಂಗದಲ್ಲಿ ಏಕಾಗ್ರಚಿತ್ತತೆ, ಆಸಕ್ತಿ, ಜ್ಞಾಪಕಶಕ್ತಿಗಳ ಕೊರತೆ ಈ ವಯಸ್ಸಿನಲ್ಲಿ ಸಾಮಾನ್ಯ. ಜತೆಗೆ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯೂ ಕಂಡುಬರುತ್ತವೆ. ವಿತಂಡವಾದ, ವಿಚಿತ್ರ ವರ್ತನೆ, ನಾಟಕೀಯ ವರ್ತನೆ, ಆತಂಕ, ಹೆದರಿಕೆ, ನಿರುತ್ಸಾಹ ಹಾಗೂ ಮನೆ ಮತ್ತು ಕಾಲೇಜಿನಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರುತ್ತದೆ. ಇದಕ್ಕೆಲ್ಲ ಆಪ್ತ ಸಮಾಲೋಚನೆಯೇ ಪರಿಹಾರ. ಆದರೆ ಆಪ್ತ ಸಮಾಲೋಚಕರೂ ಕೆಲವು ವಿಶಿಷ್ಟ ಗುಣ ಹೊಂದಿದವರಾಗಿರಬೇಕು ಎಂದು ನುಡಿದರು.
ಸಮಾಲೋಚನೆ ದಿನನಿತ್ಯದ ವ್ಯವಹಾರವಾಗಿದ್ದರೂ ಯಾರಿಗೆ ಆಪ್ತ ಸಮಾಲೋಚನೆ ಮಾಡಬೇಕೆಂಬುದು ಬಹಳ ಮುಖ್ಯ. ಯುವಜನಾಂಗಕ್ಕೆ ಭಾವನಾತ್ಮಕ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳಿಗೆ ಸಮರ್ಪಕ ಸಮಾಲೋಚನೆ ಒಂದೇ ಪರಿಹಾರ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎ.ಎಲ್. ಮುರಳೀಧರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಬಿ.ಎ.ರವಿಶಂಕರ್ ವಂದಿಸಿದರು. ಆಂಗ್ಲಭಾಷಾ ವಿಭಾಗ ಸಹಾಯಕ ಪ್ರಾಧ್ಯಾಪಕಿ ಮಧುಶ್ರೀ, ವಿದ್ಯಾರ್ಥಿ ಕಿಶನ್, ಅನಿತಾ ಅನಿಸಿಕೆ ಹಂಚಿಕೊಂಡರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.
ಎಂಬಿಎಗೆ ಪ್ರವೇಶ ಪರೀಕ್ಷೆ
ಹಾಸನ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿಗೆ ಎಂಬಿಎ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಆಯೋಜಿಸಿದೆ. ಅರ್ಜಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಢಿಢಿಢಿ.ಢಡ್ಡಿ.ಛ್ಛ.್ಝಟಿ ವೆಬ್‌ಸೈಟ್‌ನಲ್ಲಿ ಸೆ. 24 ರೊಳಗೆ ಪಡೆದುಕೊಂಡು, ಸೆ. 26 ರೊಳಗೆ ಸಲ್ಲಿಸಬಹುದಾಗಿದೆ. ಪರೀಕ್ಷೆಯು ಆಯ್ದ ಕೇಂದ್ರಗಳಲ್ಲಿ ಸೆ. 30 ರಂದು ನಡೆಯಲಿದೆ. ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಾತ್ರ ಎಂಬಿಎ ಪದವಿಗೆ ಕಾಲೇಜಿಗೆ ಸೇರಲು ಅರ್ಹತೆ ಹೊಂದಿರುತ್ತಾರೆ. ಈವರೆಗೂ ನಡೆದ ಎಂಬಿಎ ಪದವಿ ಪ್ರವೇಶ ಪರೀಕ್ಷೆಗಳನ್ನು ಬರೆಯದೆ ಇರುವ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದಾಗಿದೆ. ಪದವೀಧರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಮಕೃಷ್ಣ ತಿಳಿಸಿದ್ದಾರೆ.