ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತಾಂತರದ ಸುಳ್ಳು ಆರೋಪ ಬಹಿರಂಗಕ್ಕೆ ದಸಾಪ ಆಗ್ರಹ

Srinivasa Murthy VN
Updated On : 24 Sept 2013, 11:38 am

ಕ.ಪ್ರ.ವಾರ್ತೆ ಹಾಸನ ಸೆ. 24
ಜಿಲ್ಲೆಯಲ್ಲಿ ಮತಾಂತರ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿರುವ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮತಾಂತರ ನಡೆಯುತ್ತಿದೆ. ಯಾರು ನಡೆಸುತ್ತಿದ್ದಾರೆ. ಎಂಬ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್.ಪಿ. ಸತೀಶ್ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಲ ದಿನಗಳ ಹಿಂದೆ ಮತಾಂತರ ನೆಪದಲ್ಲಿ ಅಮಾಯಕ ಕ್ರಿಶ್ಚಿಯನ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್ ದೇವರು, ಧರ್ಮ, ಹಿಂದುತ್ವದ ಹೆಸರಲ್ಲಿ ಸಮಾಜದಲ್ಲಿ ಅಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಅಮಾಯಕ ಮುಗ್ಧರ ಮೇಲೆ ದೈಹಿಕ ಹಲ್ಲೆ ನಡೆಸಿ ಕಾನೂನು ವಿರುದ್ಧ ವರ್ತಿಸುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್ ಆರೋಪಿಸಿರುವಂತೆ ಜಿಲ್ಲೆಯಲ್ಲಿ ಎಷ್ಟು ಮತಾಂತರ ಪ್ರಕರಣಗಳನ್ನು ಅವರು ಪತ್ತೆ ಹಚ್ಚಿದ್ದಾರೆ ಎಂದು ಮೊದಲು ಬಹಿರಂಗಪಡಿಸಲಿ. ಹಾಗೊಂದು ವೇಳೆ ಮತಾಂತರ ಆಗಿದ್ದರೂ ಅದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಒತ್ತಾಯ ಹಾಗೂ ಆಮಿಷ ಒಡ್ಡುವಂತಿಲ್ಲ. ಅಂತಹ ದಾಖಲೆ ಇದ್ದಲ್ಲಿ ಸಾರ್ವಜನಿಕರ ಮುಂದೆ ಇಡಲಿ ಎಂದು ದಸಾಪ ಮುಖಂಡರು ಸವಾಲು ಹಾಕಿದ್ದಾರೆ.
ಈಚೆಗೆ ನಡೆದ ಘಟನೆಯಲ್ಲೂ ಪ್ರಾಮಾಣಿಕತೆ ಪ್ರದರ್ಶಿಸಿದ ಕೆ.ಆರ್. ಪುರಂ ಎಸ್‌ಐ ಸಿಬ್ಬಂದಿ ಹಾಸನದಲ್ಲಿ ಮತ್ತೊಂದು ಮಂಗಳೂರಿನ ಹೋಮ್ ಸ್ಟೇ ಪ್ರಕರಣದಂತೆ ಆಗಲಿದ್ದ ಗಲಭೆಯನ್ನು ತಪ್ಪಿಸಿದ್ದಾರೆ. ಇವರ ಕಾರ್ಯ ಶ್ಲಾಘನೀಯ. ಅಮಾಯಕ ವಿದ್ಯಾರ್ಥಿಗಳನ್ನು ರಕ್ಷಿಸಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಕೈಗೊಂಡ ಪೊಲೀಸರ ಕಾರ್ಯವನ್ನು ಜಿಲ್ಲೆಯ ದಲಿತ ಕ್ರಿಶ್ಚಿಯನ್ ಮುಸ್ಲಿಂ ಪ್ರಗತಿಪರ ಸಂಘಟನೆಗಳು ಸ್ವಾಗತಿಸುತ್ತವೆ. ಇಂತಹ ಪ್ರಕರಣಗಳಲ್ಲಿ ಇಡೀ ದಲಿತ ಸಂಘಟನೆಗಳು ಪೊಲೀಸರ ಪರವಾಗಿ ನಿಲ್ಲಲಿವೆ. ಇಂತಹ ಪ್ರಕರಣಗಳು ಕೋಮು ಗಲಭೆಗೆ ಕಾರಣವಾಗಿದ್ದು ಇದಕ್ಕೆ ಕಾರಣರಾದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಜಿಲ್ಲೆಯಲ್ಲಿ ನಿಜಕ್ಕೂ ಜನಸ್ನೇಹಿ ಆಡಳಿತ ನೀಡುತ್ತಿದ್ದಾರೆ. ಈಚೆಗೆ ಪತ್ರಿಕಾಗೋಷ್ಠಿ ನಡೆಸಿ ಅವರ ಜನಸ್ನೇಹಿ ಪೊಲೀಸ್ ಆಡಳಿತವನ್ನು ಟೀಕಿಸಿರುವ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ. ಶ್ರೀರಾಮ ಸೇನೆಯ ಇಂತಹ ಸಮಾಜ ವಿರೋಧಿ ಚಟವಟಿಕೆಗಳು ಹೀಗೆಯೇ ಮುಂದುವರಿದರೆ ಜಿಲ್ಲೆಯ ಎಲ್ಲ ದಲಿತ- ಕ್ರಿಶ್ಚಿಯನ್-ಮುಸ್ಲಿಂ ಸಮುದಾಯದವರು ಒಂದಾಗಿ ಸಂಘಟನೆಯ ನಿಷೇಧಕ್ಕೆ ಹೋರಾಟ ನಡೆಸಲಾಗುವುದು ಎಂದುಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement