ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ
ಕ.ಪ್ರ.ವಾರ್ತೆ ಬೇಲೂರು ಸೆ. 24
ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದು ತಿಂಗಳುಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಾಗಲಿ ಗಮನ ಹರಿಸದಿರುವುದನ್ನು ಖಂಡಿಸಿ ತಾಲೂಕು ಜಯಕರ್ನಾಟಕ ಸಂಘಟನೆ ಯಿಂದ ಸೋಮವಾರ ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ತುಂಬಿ ಬಾಳೆ ಗಿಡಗಳನ್ನು ನೆಡುವ ಮೂಲಕ ಉಗ್ರವಾಗಿ ಪ್ರತಿಭಟಿಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ತಾಲೂಕು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮುಖ್ಯ ರಸ್ತೆಯ ಮಸೀದಿ ಬೀದಿ ಹಾಗೂ ಕನ್ನಿಕಾಪರಮೇಶ್ವರಿ ಬೀದಿಯ ಮಧ್ಯಭಾಗದಲ್ಲಿ ರಸ್ತೆ ತಡೆ ನಡೆಸಿ ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣನ್ನು ತುಂಬಿ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ವಾಹನ ಸವಾರರು ಹಾಗೂ ಸಾರ್ವಜನಿಕರು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಓಡಾಡುವುದಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಿಶ್ವಪ್ರಸಿದ್ಧ ದೇವಾಲಯಕ್ಕೆ ಬರುತ್ತಾರೆ. ಆದರೆ ಈ ರಸ್ತೆಯಲ್ಲಿ ಓಡಾಡುವಾಗ ಗುಂಡಿಗಳಲ್ಲಿ ಬಿದ್ದು ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿ, ಶಾಸಕರು ಗಮನಹರಿಸದಿರುವುದು ನೋಡಿದರೆ ಸಾರ್ವಜನಿಕರ ಬಗ್ಗೆ ಇವರಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಕೆಲ ದಿನಗಳಲ್ಲಿ ಗುಂಡಿ ಮುಚ್ಚಿ ರಸ್ತೆ ಅಗಲೀಕರಣ ಗೊಳಿಸದಿದ್ದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಶಾಸಕ ವೈ.ಎನ್.ರುದ್ರೇಶಗೌಡರ ಮನೆ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಕೆ.ಸುದರ್ಶನ್ ಮಾತನಾಡಿ, ಈ ರಸ್ತೆಯ ವಿಚಾರವಾಗಿ ಸಾಕಷ್ಟು ಬಾರಿ ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸದಿರುವುದು ವಿಪರ್ಯಾಸ. ಈ ರಸ್ತೆಯಲ್ಲಿ ವಾಹನ ಸವಾರರು ತಮ್ಮ ಜೀವವನ್ನು ಕೈಯಲಿಟ್ಟುಕೊಂಡು ಓಡಾಡಬೇಕಿದೆ. ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶೀಘ್ರವಾಗಿ ರಸ್ತೆ ಅಗಲೀಕರಣಗೊಳಿಸಿ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ನಮ್ಮ ಸಂಘಟನೆಯಿಂದ ವಿನೂತನವಾಗಿ ರಸ್ತೆಯಲ್ಲಿ ಗಿಡ ನೆಡುವ ಮೂಲಕ ಪ್ರತಿಭಟಿಸುತಿದ್ದೇವೆ. ಆದಷ್ಟು ಬೇಗ ಈ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ಆರ್. ಸೋಮೇಶ್, ನಗರಾಧ್ಯಕ್ಷ ವಿ.ಎಸ್.ಬೋಜೇಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್. ತಾಲೂಕು ಮಹಿಳಾ ಅಧ್ಯಕ್ಷೆ ಜಯಂತಿ, ಯುವ ಅಧ್ಯಕ್ಷ ಶಿವರಾಜ್, ನಗರಯುವ ಅಧ್ಯಕ್ಷ ಗಿರೀಶ್, ತಾಲೂಕು ಉಪಾಧ್ಯಕ್ಷ ಸಿದ್ದೇಗೌಡ, ರಾಜಪ್ಪ, ಕಾರ್ಯಕರ್ತರು, ಆಟೋ ಚಾಲಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.