ಸಮಾಜಶಾಸ್ತ್ರ ವಿದ್ಯಾರ್ಥಿಗಳಿಗೆ ಸ್ವಾಗತ
ಕ.ಪ್ರ.ವಾರ್ತೆ ಹಾಸನ ಸೆ. 24
ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಸರಳವಾಗಿ ಕಡಿಮೆ ಕ್ಷಣಗಳಲ್ಲಿ ತೋರಿಸುವುದರ ಮೂಲಕ ಸಮರ್ಥ ಸ್ಥಿತಿಯನ್ನು ಹೊಂದಿರುತ್ತಾರೆ ಎಂದು ಪ್ರಾಂಶುಪಾಲ ಡಾ. ಐ. ಎಂ. ಮೋಹನ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಸಮಾಜಶಾಸ್ತ್ರ ವಿಭಾಗದಿಂದ ಪ್ರಥಮ ಎಂಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮಲ್ಲಿರುವ ಹಿಂಜರಿಕೆಯನ್ನು ಹೋಗಲಾಡಿಸಿ ಕೊಳ್ಳಬೇಕು. ಕಾಲೇಜಿನ ಚೌಕಟ್ಟಿನಲ್ಲಿ ಹಲವಾರು ನಿಯಮಗಳಿದ್ದು, ಅದನ್ನು ಅಳವಡಿಸಿಕೊಂಡು ಮುಖ್ಯವಾಗಿ ಸಮಯಪಾಲನೆ ಅನುಸರಿಸಬೇಕು ಎಂದರು.
ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಡಿ.ಜಿ.ಕೃಷ್ಣೇಗೌಡ ಮಾತನಾಡಿ, ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದಲ್ಲಿರುವ ಪಾಠಗಳ ಅಧ್ಯಯನ ಮಾತ್ರವಲ್ಲದೆ, ಜತೆಗೆ ವ್ಯಕ್ತಿತ್ವದ ವಿಕಾಸವಾಗಬೇಕು ಮತ್ತು ಸರ್ವತೋಮುಖ ಬೆಳವಣಿಗೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ.ಸುನಿತಾ ಮಾತನಾಡಿ, ಪದವಿಯನ್ನು ಕೇವಲ ಪದವಿಯಾಗಿ ಮುಗಿಸದೆ ವ್ಯಕ್ತಿತ್ವ ರೂಪಿಸಲು ನೆರವಾಗುವ ಜ್ಞಾನ ಪಡೆಯಬೇಕು. ಕಾಲೇಜಿನ ನಿಯಮಗಳು ಮತ್ತು ಹಮ್ಮಿಕೊಳ್ಳಲಾಗುವ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಜಿ.ಬಿ.ಪೂರ್ಣಿಮ ಮತ್ತು ವೈ.ವಿ.ಶೃತಿ ಪ್ರಾರ್ಥಿಸಿದರು. ಶ್ವೇತ ಸ್ವಾಗತಿಸಿದರು. ಲೋಕೇಶ್ ವಂದಿಸಿದರು. ಪ್ರೀತಿ ನಿರೂಪಿಸಿದರು.