ಹೆಂಡತಿ, ಮಗನಿಗೆ ಮಚ್ಚಿನಿಂದ ಹಲ್ಲೆ
ಬೇಲೂರು: ಜನಜಂಗುಳಿಯ ಸಂತೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಪುತ್ರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ತಗರೆ ಗ್ರಾಮದ ಗಿರಿಜಮ್ಮ (35) ಹಾಗೂ ಪುತ್ರ ಮನು (18) ಹಲ್ಲೆಗೊಳಗಾದವರು. ಗೌರಯ್ಯ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ. ಪಟ್ಟಣದಲ್ಲಿ ಸಂತೆ ಜನಜಂಗುಳಿಯಲ್ಲಿ ಗೌರಯ್ಯ ಮಚ್ಚಿನಿಂದ ಪತ್ನಿ ಮತ್ತು ಮಗನ ಮೇಲೆ ಮಚ್ಚಿನಿಂದ ಹೊಡೆದ ರಭಸಕ್ಕೆ ಗಿರಿಜಮ್ಮನ ತಲೆಗೆ ತೀವ್ರವಾಗಿ ಗಾಯವಾಗಿದೆ. ಪುತ್ರ ಮನುವಿನ ಕಿವಿಭಾಗದಲ್ಲಿ ಕೊಯ್ದು ಹೋಗಿದ್ದು, ಇಬ್ಬರೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಗೌರಯ್ಯನನ್ನು ಬೇಲೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಗೌರಮ್ಮ ಪತ್ರಿಕೆಯೊಂದಿಗೆ ಮಾತನಾಡಿ, ನನ್ನ ಮಗ ಹಾಗೂ ನಾನು ಹಬ್ಬಕ್ಕಾಗಿ ಮನೆಗೆ ಸಂತೆಯಿಂದ ಸಾಮಾನುಗಳನ್ನು ತರಲೆಂದು ಬೇಲೂರಿನ ಸಂತೆಗೆ ಬಂದಿದ್ದೆವು. ಈ ಸಂದರ್ಭದಲ್ಲಿ ಒಂದು ವರ್ಷದಿಂದ ಬೇರೆಯವರ ಜತೆ ವಾಸವಿದ್ದ ಪತಿ ಗೌರಯ್ಯ ಈಗ ಏಕಾಏಕಿ ಬಂದು ಕಾರಣವಿಲ್ಲದೆ ಮಚ್ಚಿನಿಂದ ನನಗೂ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿದರು.
ಆಡಳಿತಾಧಿಕಾರಿ ನೇಮಿಸಲು ಆಗ್ರಹ
ಹಾಸನ: ನ್ಯಾಯ ಮಾರ್ಗದಲ್ಲಿ ನಡೆಯದ ಹಿನ್ನೆಲೆಯಲ್ಲಿ ಹಳ್ಳಿಮೈಸೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಹಾಗೂ ಠೇವಣಿದಾರರ ಹಣವನ್ನು ವಾಪಸ್ ಕೊಡಿಸಬೇಕೆಂದು ಹಳ್ಳಿಮೈಸೂರು ಗ್ರಾಮಸ್ಥರು ಹಾಗೂ ಪಿಗ್ಮಿ ಠೇವಣಿದಾರರು ಒತ್ತಾಯಿಸಿದ್ದಾರೆ. ಈ ಸಹಕಾರ ಬ್ಯಾಂಕಿಗೆ ಪ್ರತಿದಿನ ಪಿಗ್ಮಿ ಖಾತೆಗೆ ಹಣ ಪಾವತಿ ಮಾಡುತ್ತಾ ಬಂದಿದ್ದೇವೆ. ಅವಧಿ ಮುಗಿದ ಒಂದು ವರ್ಷದ ನಂತರ ಪಿಗ್ಮಿ ಹಣವನ್ನು ವಾಪಸ್ ಹಿಂದುರಿಗಿಸುವಂತೆ ಮನವಿ ಸಲ್ಲಿಸಿದ್ದರೂ ಹಿಂದಿರುಗಿಸಲು ಬ್ಯಾಂಕಿನಲ್ಲಿ ಹಣವಿಲ್ಲ. 2013ನೇ ಸಾಲಿನ ಲೆಕ್ಕ ಪರಿಶೋಧನೆ ನಂತರ ಹಣ ಪಾವತಿಸುವ ಬಗ್ಗೆ ಚಿಂತಿಸುವುದಾಗಿ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಪಿಗ್ಮಿ ಠೇವಣಿದಾರರಾದ ಎಚ್.ಎಸ್.ಮಂಜುನಾಥ್, ತಮ್ಮಣ್ಣಗೌಡ, ಎಚ್.ಟಿ.ಕಾಳೇಗೌಡ, ಸೋಮಶೇಖರ್, ಎಂ.ಕೆ.ಅನುಸೂಯ, ಪುಷ್ಪಲತಾ, ಸವಿತಾ, ಎಚ್.ಟಿ.ಮಹದೇವ, ಎಚ್.ಎಸ್. ಅಣ್ಣೇಗೌಡ, ಟಿ.ಎಸ್.ಕಾಂತರಾಜು, ಶಾಂತಾ, ಎಚ್.ಎಂ.ಭಾರತಿ, ವಾಸಿಂ, ಎಚ್.ಸಿ.ಪುಟ್ಟರಾಜ ಇತರರು ಮನವಿ ಮಾಡಿದ್ದಾರೆ.