ಹೇಮೆಯಲ್ಲಿ ಮೀನುಗಾರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಸೆ. 24
ಹೇಮಾವತಿ ಜಲಾಶಯದಲ್ಲಿ ತಾತ್ಕಾಲಿಕವಾಗಿ ಮೀನು ಹಿಡಿಯದಂತೆ ಜಾರಿಗೊಳಿಸಿರುವ 144 ಸೆಕ್ಷನ್ ಕಾಯ್ದೆ ಕೂಡಲೇ ಹಿಂಪಡೆದು ಮೀನುಗಾರಿಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಹೇಮಾವತಿ ಜಲಾಶಯ ಮೀನುಗಾರಿಕೆ ಅಭಿವೃದ್ಧಿ ಸಂಘದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಗೊರೂರು ಹೇಮಾವತಿ ಜಲಾಶಯವನ್ನು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಸಚಿವರ ನಿರ್ದೇಶನದಂತೆ ರಾಜ್ಯ ಮೀನುಗಾರಿಕೆ ಮಹಾಮಂಡಳಿ ಹೇಮಾವತಿ ಜಲಾಶಯ ಮೀನುಗಾರಿಕೆ ಅಭಿವೃದ್ಧಿ ಸಂಘಕ್ಕೆ ಗುತ್ತಿಗೆ ನೀಡಿದೆ. ಕೆಲವು ದಿನಗಳ ಹಿಂದೆ ಜಲಾಶಯದಲ್ಲಿ ಅನಿರೀಕ್ಷಿತವಾಗಿ ಸಂಭವಿಸಿದ ಸಾವಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 144ನೇ ಸೆಕ್ಷನ್ ಜಾರಿಗೊಳಿಸಲಾಗಿದೆ. ಇದರಿಂದ ಜಲಾಶಯದಲ್ಲಿ ಮೀನುಗಾರಿಕೆಯನ್ನೆ ನಂಬಿ ಜೀವನ ನಡೆಸುತ್ತಿರುವ ನೂರಾರು ಬಡ ಮೀನುಗಾರರು ಕಷ್ಟದ ಪರಿಸ್ಥಿತಿ ಎದುರಿಸ ಬೇಕಾಗಿದೆ ಎಂದು ಅಲವತ್ತುಕೊಂಡರು.
ಗುತ್ತಿಗೆ ಪಡೆದಿರುವ ಎಲ್ಲಾ ಅರ್ಹ ಮೀನುಗಾರರಿಗೆ ಮೀನು ಹಿಡಿಯಲು ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೆಲವರು ಹೇಮಾವತಿ ಜಲಾಶಯ ಅಭಿವೃದ್ಧಿ ಸಂಘ ಎಂದು ಸುಳ್ಳು ಹೇಳಿಕೊಂಡು ಬಡ ಮೀನುಗಾರರಿಗೆ ವಂಚನೆ ಮಾಡಲಾಗುತ್ತಿದೆ. ಮೀನು ಹಿಡಿದು ಕಳ್ಳತನದಿಂದ ಮಾರಾಟ ಮಾಡುವ ವಂಚಕರಿಂದಾಗಿ ಜಲಾಶಯದ ನಿಜವಾದ ಮೀನುಗಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.
ಆದ್ದರಿಂದ ಕೂಡಲೆ 144ನೇ ಸೆಕ್ಷನ್ ತೆರವುಗೊಳಿಸಿ ಸಂಘದಿಂದ ಮೀನನ್ನು ಹಿಡಿಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹೇಮಾವತಿ ಜಲಾಶಯ ಮೀನುಗಾರಿಕೆ ಅಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಜಗದೀಶ್, ಕಾರ್ಯದರ್ಶಿ ಜಿ.ಜೆ.ವೀರರಾಜು, ಶ್ರೀನಿವಾಸಮೂರ್ತಿ, ಶಿವಣ್ಣ, ಪ್ರಕಾಶ್, ರಂಗಸ್ವಾಮಿ, ರಾಜು ಇತರರು ಇದ್ದರು.