ಎಸ್ಪಿಯಿಂದ ಇನ್ಸ್ಪೆಕ್ಟರ್ ಅಮಾನತು; ಐಜಿಪಿಯಿಂದ ರದ್ದು
ಕ.ಪ್ರ.ವಾರ್ತೆ ಹಾಸನ ಸೆ. 25
ಪೆಟ್ರೋಲ್ ಹಾಗೂ ಡಿಸೇಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಂಡಿದ್ದ ಆಲೂರು ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಜಯಲಕ್ಷ್ಮೀ ಅವರ ಅಮಾನತನ್ನು ದಕ್ಷಿಣ ವಲಯ ಐಜಿಪಿ ಹಿಂದಕ್ಕೆ ಪಡೆದಿದ್ದಾರೆ. ಇದು ಹತ್ತು ಹಲವು ಅನುಮಾನ, ಅಸಮಾಧಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಾಲ್ಕು ದಿನಗಳ ಹಿಂದೆಯಷ್ಟೇ ತಮಗೆ ದೊರೆತ ಖಚಿತ ಮಾಹಿತಿ, ದಾಖಲೆಗಳ ಆಧಾರದ ಮೇರೆಗೆ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರು ಇನ್ಸ್ಪೆಕ್ಟರ್ ಜಯಲಕ್ಷ್ಮೀ ಅವರನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದರು.
ಆದರೆ ಬುಧವಾರ ಐಜಿಪಿ ರಾಮಚಂದ್ರರಾವ್ ಅವರು ಅಮಾನತು ಆದೇಶ ಹಿಂದಕ್ಕೆ ಪಡೆದು ಜಯಲಕ್ಷ್ಮೀ ಆಲೂರು ಠಾಣೆಯಲ್ಲೇ ಮುಂದುವರಿಯಲು ಸೂಚಿಸಿದ್ದಾರೆ. ಇದು ಎಸ್ಪಿ ಅವರಿಗೆ ತೀವ್ರ ಅಸಮಾಧಾನ ಉಂಟು ಮಾಡಿದೆ ಎಂದು ಹೇಳಲಾಗಿದೆ.
ಜಯಲಕ್ಷ್ಮೀ ಅವರು ಇನ್ನೆರಡು ದಿನಗಳಲ್ಲಿ ಬೇರೆಡೆಗೆ ವರ್ಗಾವಣೆ ಆಗುವ ಆದೇಶ ಸರ್ಕಾರ ಹೊರಡಿಸುತ್ತಿತ್ತು. ಇದಕ್ಕೆ ತೊಂದರೆ ಆಗುತ್ತದೆ ಎಂದು ಭಾವಿಸಿ ಅಮಾನತು ಆದೇಶ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಮೇಲಾಧಿಕಾರಿಗಳು ಹೀಗೆ ಮಾಡಿದರೇ ಎಸ್ಪಿ ಅವರು ಕೆಳ ಹಂತದ ಅಧಿಕಾರಿಗಳಿಂದ ದಕ್ಷತೆಯಿಂದ ಕೆಲಸ ಮಾಡಿಸುವುದು ಕಷ್ಟವಾಗುತ್ತದೆ. ಕಡೇಪಕ್ಷ ಅಮಾನತು ಆದೇಶ ಹಿಂದಕ್ಕೆ ಪಡೆಯುವ ಮೊದಲು ಎಸ್ಪಿ ಅವರನ್ನು ಐಜಿಪಿ ಅವರು, ದೂರವಾಣೆಯಲ್ಲಾದರೂ ವಿವರಣೆ ಕೇಳಬಹುದಿತ್ತು. ಹಾಗೇ ಮಾಡದೇ ಏಕಾಏಕಿ ಅಮಾನತು ಆದೇಶ ಹಿಂದಕ್ಕೆ ಪಡೆದಿರುವುದು ಸರಿಯಲ್ಲ ಎಂಬ ಅಸಮಾಧಾನದ ಹೊಗೆ ಪೊಲೀಸ್ ವಲಯದಲ್ಲಿ ಎದ್ದಿದೆ. ಮೈಸೂರು ವಿಭಾಗ ಮಟ್ಟದ ಎಸ್ಐಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ಮೈಸೂರು ಐಜಿಪಿ ಕಚೇರಿಯಲ್ಲಿರುವ ಎಸ್ಪಿ ಚನ್ನಣ್ಣನವರ್, ಜಯಲಕ್ಷ್ಮೀ ಅವರ ಅಮಾನತು ಆದೇಶ ಹಿಂದಕ್ಕೆ ಪಡೆದಿರುವ ವಿಷಯವನ್ನು ಐಜಿಪಿಯವರ ಬಳಿ ಪ್ರಸ್ತಾಪಿಸಿದರು ಎನ್ನಲಾಗಿದೆ.
ಜಯಲಕ್ಷ್ಮೀ ಅವರನ್ನು ಅಮಾನತು ಮಾಡಿದ ಸಂದರ್ಭದಲ್ಲೇ ಎಸ್ಐ ಸೋಮೇಗೌಡ ಮತ್ತು ನಾಲ್ವರು ಕಾನ್ಸ್ಸ್ಟೇಬಲ್ಗಳನ್ನು ಡಿಸೇಲ್, ಪೆಟ್ರೋಲ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆಯೇ ಸೇವೆಯಿಂದ ಅಮಾನತು ಮಾಡಲಾಗಿತ್ತು. ಈಗ ಇನ್ಸ್ಪೆಕ್ಟರ್ ಜಯಲಕ್ಷ್ಮೀ ಅವರ ಅಮಾನತು ಆದೇಶವನ್ನು ಮಾತ್ರ ರದ್ದು ಮಾಡಲಾಗಿದೆ.