ಎಸ್ಪಿಯಿಂದ ಇನ್ಸ್ಪೆಕ್ಟರ್ ಸಸ್ಪೆಂಡ್: ಐಜಿಪಿಯಿಂದ ರದ್ದು!
ಹಾಸನ: ಪೆಟ್ರೋಲ್ ಹಾಗೂ ಡಿಸೇಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಲೂರು ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಜಯಲಕ್ಷ್ಮೀ ಅವರ ಅಮಾನತನ್ನು ದಕ್ಷಿಣ ವಲಯ ಐಜಿಪಿ ಹಿಂಪಡೆದಿದ್ದಾರೆ.
ನಾಲ್ಕು ದಿನಗಳ ಹಿಂದೆಯಷ್ಟೇ ತಮಗೆ ದೊರೆತ ಖಚಿತ ಮಾಹಿತಿ, ದಾಖಲೆಗಳ ಆಧಾರದ ಮೇಲೆ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರು ಇನ್ಸ್ಪೆಕ್ಟರ್ ಜಯಲಕ್ಷ್ಮೀ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದರು. ಆದರೆ ಬುಧವಾರ ಐಜಿಪಿ ರಾಮಚಂದ್ರರಾವ್ ಅವರು ಅಮಾನತು ಆದೇಶ ಹಿಂಪಡೆದು ಜಯಲಕ್ಷ್ಮೀ ಆಲೂರು ಠಾಣೆಯಲ್ಲೇ ಮುಂದುವರಿಯಲು ಸೂಚಿಸಿದ್ದಾರೆ. ಇದು ಎಸ್ಪಿ ಅವರಿಗೆ ತೀವ್ರ ಅಸಮಾಧಾನ ಉಂಟು ಮಾಡಿದೆ ಎಂದು ಹೇಳಲಾಗಿದೆ.
ಇನ್ನೆರಡು ದಿನಗಳಲ್ಲಿ ಜಯಲಕ್ಷ್ಮೀ ಬೇರೆಡೆಗೆ ವರ್ಗಾವಣೆ ಆಗುವ ಆದೇಶವನ್ನು ಸರ್ಕಾರ ಹೊರಡಿಸುತ್ತಿತ್ತು. ಇದಕ್ಕೆ ತೊಂದರೆ ಆಗುತ್ತದೆ ಎಂದು ಭಾವಿಸಿ ಅಮಾನತು ಆದೇಶ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.
ಹಾಗೆ ಮಾಡದೇ ಏಕಾಏಕಿ ಅಮಾನತು ಆದೇಶ ಹಿಂಪಡೆದಿರುವುದು ಸರಿಯಲ್ಲ ಎಂಬ ಅಸಮಾಧಾನದ ಹೊಗೆ ಪೊಲೀಸ್ ವಲಯದಲ್ಲಿ ಎದ್ದಿದೆ. ಮೈಸೂರು ವಿಭಾಗ ಮಟ್ಟದ ಎಸ್ಐಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ಮೈಸೂರು ಐಜಿಪಿ ಕಚೇರಿಯಲ್ಲಿರುವ ಎಸ್ಪಿ ಚನ್ನಣ್ಣನವರ್, ಜಯಲಕ್ಷ್ಮೀ ಅವರ ಅಮಾನತು ಆದೇಶ ಹಿಂದಕ್ಕೆ ಪಡೆದಿರುವ ವಿಷಯವನ್ನು ಐಜಿಪಿಯವರ ಬಳಿ ಪ್ರಸ್ತಾಪಿಸಿದರು ಎನ್ನಲಾಗಿದೆ. ಜಯಲಕ್ಷ್ಮೀ ಅವರನ್ನು ಅಮಾನತು ಮಾಡಿದ ಸಂದರ್ಭದಲ್ಲೇ ಎಸ್ಐ ಸೋಮೇಗೌಡ ಮತ್ತು ನಾಲ್ವರು ಕಾನ್ಸ್ಸ್ಟೇಬಲ್ಗಳನ್ನು ಡಿಸೇಲ್, ಪೆಟ್ರೋಲ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆಯೇ ಸೇವೆಯಿಂದ ಅಮಾನತು ಮಾಡಲಾಗಿತ್ತು.
ಈಗ ಇನ್ಸ್ಪೆಕ್ಟರ್ ಜಯಲಕ್ಷ್ಮೀ ಅವರ ಅಮಾನತು ಆದೇಶವನ್ನು ಮಾತ್ರ ರದ್ದು ಮಾಡಲಾಗಿದೆ.