ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ, ಕೊಲೆ ಶಂಕೆ
ಹೊಳೆನರಸೀಪುರ: ಎರಡು ದಿನದ ಹಿಂದೆ ಕಾಣೆಯಾಗಿದ್ದ ಮಹಿಳೆ ಬುಧವಾರ ಶವವಾಗಿ ಪತ್ತೆಯಾಗಿದ್ದು ಗಂಡನೇ ಆಕೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಕಟ್ಟಾಯ ಹೋಬಳಿ ಮುಕುಂದೂರು ಗ್ರಾಮದ ಶಿವನಂಜೇಗೌಡ ಎಂಬುವರ ಪುತ್ರಿ ವಿಮಲಾ ಅವರನ್ನು 6 ವರ್ಷಗಳ ಹಿಂದೆ ಹೊಳೆನರಸೀಪುರ ತಾ. ಬೆಟ್ಟದಸಾತೇನಹಳ್ಳಿಯ ವೀರಪ್ಪಾಜಿ ಮಗ ರಾಜೇಶಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಸೆ.22 ರಂದು ಬೆಳಿಗ್ಗೆ 10ಕ್ಕೆ ಹೊಲಕ್ಕೆ ಹೋದವಳು ಸಂಜೆಯಾದರೂ ಹಿಂತಿರುಗಿ ಬರದಿದ್ದಾಗ ಗಂಡನ ಮನೆಯವರು ಸಾವಿಗೀಡಾದ ಮಹಿಳೆಯ ತಂದೆಗೆ ಕರೆ ಮಾಡಿ ಕಾಣೆಯಾಗಿರುವ ವಿಷಯ ತಿಳಿಸಿದರು ಎನ್ನಲಾಗಿದೆ.
ಎರಡೂ ಕಡೆಯವರೂ ಹುಡುಕಾಟ ನಡೆಸಿದ ನಂತರವೂ ವಿಮಲಾ ಸಿಗದಿದ್ದಾಗ ತಂದೆ ಶಿವನಂಜೇಗೌಡರು ಹಾಗೂ ಗ್ರಾಮಸ್ಥರು ಪಟ್ಟಣದ ಪೋಲಿಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿರುವುದರ ಹಿಂದೆ ಆಕೆಯ ಗಂಡನ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದರು.
ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 200ಗ್ರಾಂ ಚಿನ್ನ ಹಾಗೂ 50 ಸಾವಿರ ರು. ನಗದು ನೀಡಲಾಗಿತ್ತು. ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದ ಪತಿ ರಾಜೇಶ ವಿಮಲಾಳಿಗೆ ತವರು ಮನೆಯಿಂದ ಪದೇ ಪದೇ ಹಣ ತರುವಂತೆ ಒತ್ತಾಯಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ.
ಈ ಬಗ್ಗೆ ಗ್ರಾಮಸ್ಥರೆಲ್ಲಾ ಸೇರಿ ಹಲವು ಬಾರಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಇತ್ತೀಚೆಗೆ ಟ್ರಾಕ್ಟರ್ ಕೊಳ್ಳಲು 2 ಲಕ್ಷ ರು. ತರುವಂತೆ ಪೀಡಿಸಿದಾಗ 1 ಲಕ್ಷ ರು. ಹೊಂದಿಸಿ ಕೊಟ್ಟಿದ್ದರು.
ನನ್ನ ಮಗಳನ್ನು ಅವಳ ಪತಿಯೇ ಏನೋ ಮಾಡಿದ್ಧಾನೆ ಎಂದು ದೂರಿನಲ್ಲಿ ತಿಳಿಸಿದ್ದರು.
ಟೌನ್ ಠಾಣೆ ಎಸ್‌ಐ ಶಿವಕುಮಾರ್ ಅವರು ಪತಿ ರಾಜೇಶ ಮನೆಯವರನ್ನೆಲ್ಲಾ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಕಾಣೆಯಾಗಿದ್ದ ಮಹಿಳೆಯ ಶವ ದೊಡ್ಡಕುಂಚೇವು ಗ್ರಾಮದ ಕೆರೆಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜೇಶನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಎಎಸ್‌ಪಿ ವಿನಾಯಕ್ ಪಾಟೀಲ್, ಸಿಪಿಐ ಗೋಪಾಲನಾಯಕ್, ನಗರ ಠಾಣಾ ಎಸ್‌ಐ ಶಿವಕುಮಾರ್ ಮುಂತಾದವರು ಭೇಟಿ ನೀಡಿದ್ದರು.
ಶಿರಡಿ ಸಾಯಿಬಾಬಾ ವಿಗ್ರಹ ಪುರ ಪ್ರವೇಶ
ಹಾಸನ: ಶಿರಡಿ ಸಾಯಿ ಬಾಬಾ ವಿಗ್ರಹ ಪುರಪ್ರವೇಶಕ್ಕೆ ನಗರದಲ್ಲಿ ಅದ್ಧೂರಿ ಸ್ವಾಗತ ನೀಡುವ ಮೂಲಕ ಬುಧವಾರ ಬರ ಮಾಡಿಕೊಳ್ಳಲಾಯಿತು. ನಗರದ ಹಾಸನಾಂಬ ಕಲಾಕ್ಷೇತ್ರದ ಮುಂಭಾಗಕ್ಕೆ ಆಗಮಿಸಿದ ಸಾಯಿ ಬಾಬಾ ವಿಗ್ರಹವು ಜೈಪುರ ಅಮೃತ ಶಿಲೆಯಿಂದ ತಯಾರಿಸಲ್ಪಟ್ಟ ವಿಗ್ರಹವನ್ನು ಶಿರಡಿಗೆ ಕೊಡೂಯ್ದು ಪೂಜೆ ಸಲ್ಲಿಸಿ ನಂತರ ಪ್ರತಿಷ್ಠಾಪನೆ ಮಾಡಲು ಹಾಸನದ ಸಾಲಗಾಮೆ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಾಬಾ ಮಂದಿರಕ್ಕೆ ಮರೆವಣಿಗೆ ಮೂಲಕ ಭಕ್ತಾಧಿಗಳ ಸಮ್ಮುಖದಲ್ಲಿ ಭಜನೆಯೊಂದಿಗೆ ಕರೆದೊಯ್ಯಲಾಯಿತು. ಇದೆ ವೇಳೆ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಭಕ್ತರು ಇದ್ದರು.