ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಗರದಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

Srinivasa Murthy VN
Updated On : 25 Sept 2013, 11:46 am

ಕ.ಪ್ರ.ವಾರ್ತೆ ಹಾಸನ ಸೆ. 25
ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದವರು ಬುಧವಾರ ತರಗತಿಗಳನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ 2005-06ನೇ ಸಾಲಿನಲ್ಲಿ ಸುತ್ತೋಲೆ ಹೊರಡಿಸಿ, ಏ.27,2005ರಂದು ಅಧಿಕೃತ ಪ್ರಕಟಣೆ ಮುಖಾಂತರ ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ರಾಜ್ಯಾದ್ಯಂತ ಖಾಲಿ ಇರುವ ವಿಷಯವಾರು ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರ ಸುಪರ್ದಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಅಭಿವೃದ್ಧಿ ಸಮಿತಿ, ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ಮುಖಾಂತರ ಆ.3. 2005ರಲ್ಲಿ ಸಂದರ್ಶನ ನಡೆಸಿತು.
ಕರ್ನಾಟಕ ಲೋಕಸೇವಾ ಆಯೋಗ ನಿಯಮಾವಳಿಗಳಂತೆ ಆಯ್ಕೆ ಮಾಡಿತು. ಅದರಂತೆ ಇದುವರೆಗೂ ನಾವು ಶ್ರದ್ಧೆಯಿಂದ ಕ್ರಿಯಾಶೀಲರಾಗಿ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಆದರೂ ಅಧಿಕಾರಕ್ಕೆ ಬರುವಂತಹ ರಾಜ್ಯ ಸರ್ಕಾರಗಳು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಸೇವಾ ಭದ್ರತೆ ಇಲ್ಲದೆ ಉಪನ್ಯಾಸಕರು ವನವಾಸ ಪಡುವಂತಾಗಿದ್ದು, ಇದರಿಂದ ಉಪನ್ಯಾಸಕರ ಸ್ಥಿತಿ ಅತಂತ್ರವಾಗಿದೆ ಎಂದು ಆರೋಪಿಸಿದರು.
ಉಪನ್ಯಾಸಕರ ಬೋಧನಾ ಸೇವೆಯನ್ನು ಸರ್ಕಾರ ಸಂದರ್ಭಕ್ಕೆ ಅನುಸಾರವಾಗಿ ಬಳಸಿಕೊಳ್ಳುತ್ತಿದೆ. ಆದರೆ ಅತಿಥಿ ಉಪನ್ಯಾಸಕರ ಸ್ಥಿತಿ ಮಾತ್ರ ದಯನೀಯವಾಗಿದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಬದಲಾವಣೆ ಮಾಡುತ್ತಿದ್ದು, ಈ ಹಿಂದೆ ಸೇವೆ ಸಲ್ಲಿಸಿದ ಹಿರಿಯ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೆ, ಬದುಕುವ ಹಕ್ಕನ್ನು ಕಸಿಯುತ್ತಿದ್ದರಿಂದ ಉಪನ್ಯಾಸಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಮಾಸಿಕ 10 ಸಾವಿರ ರು. ಹಾಗೂ 8 ಸಾವಿರ ರು.ಗಳ ಗೌರವ ವೇತನವನ್ನು ವರ್ಷದ ಕೊನೆಯಲ್ಲಿ ನೀಡುತ್ತಾ ಬಂದಿದೆ. ಇದರಿಂದ ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ. ಜೊತೆಗೆ ಒಂದೇ ಕಾಲೇಜಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿರುವುದರಿಂದ ಕೊಡುವ ಅಲ್ಪ ಗೌರವ ಧನದಲ್ಲಿ ಸಂಸಾರ ನಿರ್ವಹಿಸುವುದು ಕಷ್ಟವಾಗಿದೆ. ಈಗಿನ ಬೆಲೆಗಳಲ್ಲಿ ಬರುವ ಗೌರವ ಧನಕ್ಕಿಂತ ದುಪ್ಪಟ್ಟು ಸಾಲ ಮಾಡಬೇಕಾಗಿದೆ ಎಂದು ಅಲವತ್ತುಕೊಂಡ ಪ್ರತಿಭಟನಾಕಾರರು ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಶಿವಪ್ಪ, ಗೌರವಾಧ್ಯಕ್ಷ ಎಸ್.ವಿ.ಗಣೇಶ್, ಅರುಣಣ್ಕುಮಾರ್, ತಿಮ್ಮಪ್ಪಗೌಡ, ತಿಮ್ಮಶೆಟ್ಟಿ, ಯೋಗೇಶ್, ರಾಘವೇಂದ್ರ ಹಾಗೂ ಇತರರು ಇದ್ದರು.

ಬೇಡಿಕೆಗಳು
-2005ರಿಂದ ಪ್ರಸ್ತುತದವರೆಗೆ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು.
-ಪ್ರಸ್ತುತ ಮಾಹೆಯಾನ 10 ಸಾವಿರ ರು. ಹಾಗೂ 8 ಸಾವಿರ ರು.ಗಳನ್ನು ಯುಜಿಸಿ ನಿಯಮದಂತೆ 25 ಸಾವಿರ ರು.ಗಳಿಗೆ ಗೌರವಧನ ಹೆಚ್ಚಿಸಬೇಕು. ಹಾಗೂ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು.
-ನೇರ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಈಗಾಗಲೇ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶೇ.80ರಷ್ಟು ಹದ್ದೆಗಳನ್ನು ಮೀಸಲಿಡುವುದು ಹಾಗೂ ಸೇವೆಗೆ ಸೇರಿದ ದಿನದಿಂದ ವಯೋವುತಿಯನ್ನು ಆಯ್ಕೆ ಸಂದರ್ಭದಲ್ಲಿ ಪರಿಗಣಿಸುವುದು.
-ವಾರ್ಷಿಕ ಸರಾಸರಿ ಪ್ರತಿವರ್ಷಕ್ಕೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ 10 ಕೃಪಾಂಕ ನೀಡುವುದು.
-ಸೆಮಿಸ್ಟರ್, ನಾನ್ ಸೆಮಿಸ್ಟರ್ ಅಭ್ಯರ್ಥಿಗಳು ಪಡೆದ ಅಂಕಗಳ ಮಧ್ಯೆ ಶೇ.15ರಿಂದ 20 ಅಂಕಗಳು ವ್ಯತ್ಯಾಸವಿದ್ದು, ಆಯ್ಕೆ ಸಂದರ್ಭದಲ್ಲಿ ನಾನ್ ಸೆಮಿಸ್ಟರ್ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿರುವುದರಿಂದ ಇದನ್ನು ಕೂಡಲೇ ಸರಿಪಡಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement