ಮಹಿಳೆಯರ ಕಳ್ಳ ಸಾಗಾಣಿಕೆ ದುರಂತ
ಕ.ಪ್ರ.ವಾರ್ತೆ ಹಾಸನ ಸೆ. 25
ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವೇದಿಕೆಯಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಸಾಗಾಣಿಕೆ ಕುರಿತು ಸಂವಾದ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರೊ.ಡಿ.ಜಿ.ಕೃಷ್ಣೇಗೌಡ, ಮಹಿಳೆಯರ ಸಾಗಾಣಿಕೆ ಮತ್ತು ಅವರನ್ನು ದುರಪಯೋಗ ಪಡಿಸಿಕೊಳ್ಳುತ್ತಿರುವುದು ದುರಂತವಾಗಿದೆ. ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಥೈಲಾಂಡ್, ದಕ್ಷಿಣ ಆಫ್ರಿಕಾ, ಭಾರತ ಹಾಗೂ ಇತರೆ ದೇಶಗಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಾಗಾಣಿಕೆ ಹೆಚ್ಚಾಗಿ ನಡೆಯುತ್ತಿದ್ದು, ಭಾರತದಲ್ಲಿ ತಮಿಳುನಾಡಿನಲ್ಲಿ ಹೆಚ್ಚಾಗಿ ಈ ಕೃತ್ಯಗಳು ನಡೆಯುತ್ತಿದೆ. ರಾಜ್ಯದಲ್ಲಿ ಮಂಗಳೂರು, ರಾಯಚೂರು ಹಾಗೂ ಇತರೆಗಳಲ್ಲಿ ಮಹಿಳೆಯರ ಸಾಗಾಣಿಕೆ ನಡೆಯುತ್ತ ನಡೆಯುತ್ತಿದೆ. ಮಹಿಳೆಯರನ್ನು ಹೆಚ್ಚಾಗಿ ಲೈಂಗಿಕತೆಗೆ ಬಳಿಸಿಕೊಳ್ಳುತ್ತಿರುವುದರಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ ಎಂದರು. ಆದ್ದರಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಿ ಎಂದು ಹೇಳಿದರು.
ಕಲಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ.ಸುನೀತ, ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ, ಪ್ರೊ. ಪ್ರಶಾಂತ್ಭಟ್, ವಕೀಲೆ ಎಂ.ಸುಮಾ ಇದ್ದರು.
'ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ'
ಜಾವಗಲ್: ಆರೋಗ್ಯಕರ ಸಮಾಜ ನಿರ್ಮಾಣದ ಹಿಂದೆ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂದು ಪ್ರಭಾರಿ ಉಪಪ್ರಾಂಶುಪಾಲ ಕೆ.ಎಂ ಪುಟ್ಟಶಂಕರಪ್ಪ ತಿಳಿಸಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ.ರಾಧಾಕೃಷ್ಣನ್ ಅವರು ಉತ್ತಮ ಶಿಕ್ಷಕ, ಉಪನ್ಯಾಸಕ, ಪ್ರಾಧ್ಯಾಪಕ, ತತ್ವಜ್ಞಾನಿ, ದಾರ್ಶನಿಕ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ದೇಶದ ಅಭ್ಯುದಯಕ್ಕೆ ಶ್ರಮಿಸಿದ ಮಹಾನ್ ಚೇತನವಾಗಿದ್ದರು ಎಂದರು. ಸಮಾರಂಭದಲ್ಲಿ ಹಿರಿಯ ಶಿಕ್ಷಕ ರಾಮಲಿಂಗಯ್ಯ, ಮರುಳಸಿದ್ದಪ್ಪ, ಶಿವಲಿಂಗಮೂರ್ತಿ, ದಿಂಗಾಲಿ, ವಿದ್ಯಾ, ಸೌಮ್ಯ ಇದ್ದರು.