ಅಭಿವೃದ್ಧಿಯೇ ನಮ್ಮ ಗುರಿ: ಶಾಸಕ
-ಪಿ.ರವಿಕುಮಾರ್
ಹಾಸನ: ಕಳೆದ 24 ದಿನಗಳಿಂದ ಹಾಸನ ನಗರ ಹಾಗೂ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ವವಿಸ್ತಾರವಾಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಕ್ಯಾಂಪೇನ್ ಸ್ಟೋರಿಗೆ ಸಂಬಂಧಿಸಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ನಗರದ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಅಭಿವೃದ್ಧಿ ಕುರಿತಂತೆ ನಾವು ಹಲವು ಕನಸುಗಳನ್ನು ಕಂಡಿದ್ದೇವೆ. ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ನಗರದ ಸಮಸ್ಯೆಗಳನ್ನು ಕುರಿತಂತೆ ಶೀಘ್ರ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವುಗಳಿಗೆ ಹಂತಹಂತವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು ನಗರದಲ್ಲಿ ಸ್ವಚ್ಛತೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಕಸದ ಟೆಂಡರ್ ಆಗಲಿದ್ದು, ಮೂರು ವಿಭಾಗ ಮಾಡಿ ಗುತ್ತಿಗೆಯನ್ನು ನೀಡಲಾಗುತ್ತದೆ. ನಗರದ ಸಂಪೂರ್ಣ ಸ್ವಚ್ಛತೆಯೇ ನಗರಸಭೆಯ ಉದ್ದೇಶ. ಜೊತೆಗೆ ನಗರದಲ್ಲಿನ ಕಸ ವಿಲೇವಾರಿಗೆ ಕಸದ ಆಟೋಗಳು ಬಂದಿದ್ದು, ಅವುಗಳು ಕಾರ್ಯಾರಂಭ ಶೀಘ್ರವೇ ಮಾಡಲಾಗುತ್ತದೆ. ಜೊತೆಗೆ ನಗರಸಭೆಯಿಂದ ಖರೀದಿಸಲಾಗಿದ್ದ ಕ್ಯಾಂಟರ್ ಲಾರಿಗಳು ಹಾಗೂ ಇತರೆ ವಾಹನಗಳನ್ನೂ ಕೂಡಲೇ ರಿಪೇರಿ ಮಾಡಿಸಿ ಅವುಗಳು ಸಹ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು.
ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ದುದ್ದ ರಸ್ತೆ ಕಾಮಗಾರಿ ನಡೆಸುವುದರ ಬಗ್ಗೆ ಗುತ್ತಿಗೆದಾರರ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಕಾಮಗಾರಿ ನಡೆಸುವಂತೆ ನಾವು ಕೂಡ ಒತ್ತಡ ಹಾಕಿದ್ದೇವೆ. ಇನ್ನೂ ಅರಕಲಗೂಡು ರಸ್ತೆಗೆ ಸಂಬಂಧಿಸಿದಂತೆ ಗುಂಡಿ ಮುಚ್ಚುವಂತಹ ಕಾರ್ಯಗಳಿಗೆ ಅನುಮತಿ ಸಿಕ್ಕಿದ್ದು, ಆ ರಸ್ತೆಯನ್ನು ತಾತ್ಕಾಲಿಕ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲಾಗುತ್ತಿದೆ ಎಂದರು. ಬೈಪಾಸ್ ರಸ್ತೆಯಲ್ಲಿ ಮರಳು ಲಾರಿಗಳು ಅಲ್ಲೇ ನಿಲ್ಲುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಅಲ್ಲಿ ರಸ್ತೆಯನ್ನು ಅಗಲೀಕರಣಗೊಳಿಸ ಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗುವುದು.
-ಶಾಸಕ ಎಚ್.ಎಸ್.ಪ್ರಕಾಶ್
ಪುರದಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಸೇರ್ಪಡೆಯಾಗಿದೆ. ಈ ದೇವಿ ಬಗ್ಗೆ ಭಕ್ತಾಧಿಗಳಲ್ಲಿ ಅಪಾರ ನಂಬಿಕೆಯಿದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಇಲ್ಲಿ ಹಂತ ಹಂತವಾಗಿ ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು. ದೇವಾಲಯ ಜಾಗ ಉಳಿಸುವಂತಹ, ಪಾರ್ಕಿಂಗ್ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇಲಾಖೆಯಿಂದ ದೇವಾಲಯದಲ್ಲಿ ಹುಂಡಿಯನ್ನು ಇರಿಸಲಾಗಿತ್ತು. 2 ತಿಂಗಳ ಅವಧಿಯಲ್ಲಿ ಒಟ್ಟಾರೆಯಾಗಿ 4 ಲಕ್ಷ ರು.ನಷ್ಟು ಹಣ ಶೇಖರಣೆಯಾಗಿದೆ. ಜೊತೆಗೆ ಆ ದೇವಾಲಯದಲ್ಲಿ ಜನರೇ ಪೂಜೆಯನ್ನು ನೆರವೇರಿಸುತ್ತಿರುವುದರಿಂದ ಅಲ್ಲಿಗೆ ಪೂಜಾರಿಯನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಒಟ್ಟಾರೆಯಾಗಿ ದೇವಾಲಯದ ಅಭಿವೃದ್ಧಿ ಕ್ರಮಕೈಗೊಳ್ಳಲಾಗುತ್ತಿದೆ.
-ಮಂಜುನಾಥ್, ತಹಸೀಲ್ದಾರ್
ಜಿಲ್ಲೆಯಲ್ಲಿ ಆನೆಗಳು ಸಂಖ್ಯೆ ಹೆಚ್ಚಾಗಿದ್ದು, ಈ ಪೈಕಿ ಮಕ್ನಾ ಎನ್ನುವ ಆನೆ ಹೆಚ್ಚು ತೊಂದರೆ ನೀಡುತ್ತಿದೆ. ಅದನ್ನು ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿದೆ. ಮಳೆ ಸಂಪೂರ್ಣವಾಗಿ ನಿಂತ ನಂತರ ಆನೆ ಸೆರೆ ಹಿಡಿಯುವ ಕಾರ್ಯ ನಡೆಸಲಾಗುತ್ತದೆ. ಜೊತೆಗೆ ಇತರೆ ಆನೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತದೆ.
-ಲಕ್ಷ್ಮಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ನಗರದಲ್ಲಿ ಕಸದ ರಾಶಿಗಳು, ಅನೈರ್ಮಲ್ಯ, ಗುಂಡಿ ಬಿದ್ದಿರುವ ರಸ್ತೆಗಳು ಸರ್ವೇ ಸಾಮಾನ್ಯವಾಗಿದ್ದು, ಇದರಿಂದ ಜನತೆಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಾರ್ವಜನಿಕರು ಪ್ರತಿಭಟನೆ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 6 ತಿಂಗಳು ಬದುಕುವ ವ್ಯಕ್ತಿ ಮೂರೇ ತಿಂಗಳಿಗೆ ಸಾವನ್ನುಪ್ಪುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಪತ್ರಿಕೆಯಲ್ಲಿ ಸ್ವವಿಸ್ತಾರವಾಗಿ ಬಿತ್ತರವಾಗಿದೆ. ಅದು ಕೇವಲ ಪತ್ರಿಕೆಗೇ ಸೀಮಿತವಾಗದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಗರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಅನಿರ್ವಾಯವಾಗಿದೆ.
-ದಿನೇಶ್, ಕೇಬಲ್ ಆಪರೇಟರ್