'ಮಾನವೀಯ ಮೌಲ್ಯಗಳಿಗೆ ಇಂದಿಲ್ಲ ಬೆಲೆ'
ಹಾಸನ: ಸಹ ಮಾನವನ ಬಗೆಗೆ ಪ್ರೀತಿ, ನಿಸ್ವಾರ್ಥ ಸೇವಾ ಮನೋ ಭಾವ, ವಿಶ್ವ ಮಾನವನ ಮನ:ಸ್ಥಿತಿಗಳನ್ನು ರೂಢಿಸಿಕೊಂಡು ಪ್ರತಿಯೊಬ್ಬರೂ ಶಾಂತಿ ಪಡೆದು ಆ ಮೂಲಕ ವಿಶ್ವಶಾಂತಿಯ ಕನಸನ್ನು ಕಾಣಲು ಸಾಧ್ಯ ಎಂದು ಮೊಸಳೆಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಡಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಶಾಂತಿ ದಿನಾಚರಣೆಯಲ್ಲಿ ಮನ: ಶಾಂತಿಯಿಂದ ವಿಶ್ವಶಾಂತಿಯೆಡೆಗೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇಂದು ಮನುಷ್ಯನ ಜೀವನ ಯಾಂತ್ರಿಕವಾಗಿದ್ದು, ನಿರಂತರ ಒತ್ತಡದಿಂದ ಕೂಡಿದೆ. ಹಣ ಗಳಿಸುವುದೊಂದೇ ಧ್ಯೇಯವಾಗಿ ಮಾನವೀಯ ಹಾಗೂ ನೈತಿಕ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ದೇಶಭಕ್ತಿ, ವಿಶ್ವಶಾಂತಿ ಕೇವಲ ಆಚರಣೆಯ ಹಾಗೂ ಭಾಷಣದ ವಿಷಯಗಳಾಗಿ ಮಾತ್ರ ಕಾಣುತ್ತಿವೆ. ಇಂದು ಜಾಗತಿಕ ಪರಿಸ್ಥಿತಿ ತುಂಬಾ ಸಂಕೀರ್ಣವಾಗಿದೆ. ಮಾನವನ ಸ್ವಯಂಕೃತಾಪರಾಧದ ಪರಿಣಾಮವಾಗಿ ಇಡೀ ವಿಶ್ವ ಹಿಂಸೆ ಮತ್ತು ಅಶಾಂತಿಯ ತಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸುಖವನ್ನು ಅರಸುವುದು ಕೇವಲ ಭ್ರಮೆಯಾಗುತ್ತದೆ ಎಂದು ನುಡಿದರು.
ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ನಿಜವಾದ ಮನ:ಶಾಂತಿಯನ್ನು ಎಲ್ಲೂ ಅರಸಬೇಕಿಲ್ಲ. ಅದು ನಮ್ಮ ಹೃದಯದಲ್ಲೇ ಇದೆ. ಮತ್ತೊಬ್ಬರನ್ನು ದ್ವೇಷಿಸದೆ, ಹಿಂಸಿಸದೆ, ದುರಾಸೆಯನ್ನು ಬೆಳೆಸಿಕೊಳ್ಳದೆ ಅದನ್ನು ಜಾಗೃತ ಗೊಳಿಸಿಕೊಳ್ಳಬೇಕಿದೆ. ಪ್ರತಿಫಲದ, ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಆತ್ಮತೃಪ್ತಿಗಾಗಿ ಮಾತ್ರ ತಮ್ಮ ತಮ್ಮ ಕೆಲಸವನ್ನು ಮಾಡಬೇಕು. ಯಾವುದೇ ಸಂದರ್ಭದಲ್ಲಿ ನಿರಾಸೆಯನ್ನು ಹೊಂದದೆ, ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು ಆಶಾವಾದಿ ಗಳಾಗಬೇಕು. ಆಗ ಮನ:ಶಾಂತಿ ನೆಲೆಸುತ್ತದೆ. ಹಿಂಸೆ ಎನ್ನುವುದು ಕ್ರೂರವಾಗಿ ಕಂಡು, ನಮ್ಮ ಸುತ್ತಲಿನ ಜನ, ಸಮಾಜ, ದೇಶ, ವಿಶ್ವ ನನ್ನದೆಂಬ ಭಾವನೆ ಮೂಡುತ್ತದೆ. ಪ್ರತಿಯೊಬ್ಬರ ಹೃದಯದಲ್ಲಿ ಈ ಪರಿವರ್ತನೆಯಾದಾಗ ನಿಜವಾದ ವಿಶ್ವಶಾಂತಿಯ ಪರಿಕಲ್ಪನೆ ಮೂಡುತ್ತದೆ. ಅದಕ್ಕಾಗಿ ಎಲ್ಲರೂ ಈ ವಿಶ್ವಮಾನವ ಸಿದ್ಧಾಂತ ಅಳವಡಿಸಿಕೊಂಡು ಜಗತ್ತಿನಾದ್ಯಂತ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಗಳಾಗಬೇಕೆಂದು ಹೇಳಿದರು.
ಇದೇ ಜೀವನದ ಸಾರ್ಥಕತೆ: ಗೊರೂರು ಶಿವೇಶ್ ಮಾತನಾಡಿ, ಸಮಾಜದಲ್ಲಿ ಎಷ್ಟೋ ಮಹನೀಯರು ತಮ್ಮ ಸ್ವಂತ ಸುಖವನ್ನು ತ್ಯಾಗ ಮಾಡಿ ಅಂಗವಿಕಲರ, ಕುಷ್ಠರೋಗಿಗಳ, ಅಸಹಾಯಕರ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆ ಮೂಲಕ ಆತ್ಮತೃಪ್ತಿಯನ್ನು ಪಡೆದು ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ನಾವು ಜೀವಂತವಾಗಿ ಇದ್ದೇವೆ ಎನ್ನುವುದಕ್ಕಿಂತಲೂ ಇತರರಿಗಾಗಿ ಬದುಕುತ್ತಿದ್ದೇವೆ ಎಂಬ ಭಾವ ನಮಗೆ ನೆಮ್ಮದಿಯ ಭಾವನೆಯನ್ನು ನೀಡ ಬಲ್ಲದು. ಇದೇ ಜೀವನದ ಸಾರ್ಥಕತೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕ ಎಚ್.ಬಿ. ರಮೇಶ್ ಮಾತನಾಡಿ, ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಇದ್ದಲ್ಲಿ ಮಾತ್ರ ಮನುಷ್ಯ ಯಾವುದೇ ಸಾಧನೆ ಯನ್ನು ಮಾಡಲು ಸಾಧ್ಯ. ಅದಕ್ಕಾಗಿ ಶಿಸ್ತುಬದ್ಧ ದಿನಚರಿ, ಮಿತವಾದ ಆಹಾರ, ಯೋಗ, ಧ್ಯಾನ ಪ್ರಾಣಾ ಯಾಮಗಳು ಅತ್ಯಂತ ಅಗತ್ಯವಾಗಿವೆ. ಮಾನಸಿಕ ಆರೋಗ್ಯ ಮತ್ತು ನೆಮ್ಮದಿ ಯುಕ್ತ ಜೀವನ ಶಾಂತಿಯನ್ನು ತಂದುಕೊಡುತ್ತದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ಶಿಕ್ಷಣ ಶಾಲೆಯ ಯೋಗ ಪಟುಗಳು ಇದ್ದರು.