ಸಾಹಸಸಿಂಹನಿಗೆ ನಮನ ಕಾರ್ಯಕ್ರಮ
ಹಾಸನ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಾಹಸ ಸಿಂಹ ದಿ. ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಸಾಹಸ ಸಿಂಹನಿಗೆ ನಮನ ಕಾರ್ಯಕ್ರಮವನ್ನು ಪ್ರಸಾದ್ ಸ್ನೇಹಲೋಕ ಹಾಗೂ ಎಸ್.ಜಿ.ಆರ್. ಸ್ಪೋಕನ್ ಇಂಗ್ಲಿಷ್ ಸೆಂಟರ್ ಆಶ್ರಯದಲ್ಲಿ ಆಯೋಜಿಸಿ ಹಿರಿಯ ಕಲಾವಿದನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಬಿ.ಎನ್.ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಮತ್ತು ನವ ಕರ್ನಾಟಕ ಯುವ ಶಕ್ತಿಯ ರಾಜ್ಯಾಧ್ಯಕ್ಷ ಕೆ.ಎನ್.ಲಿಂಗೇಗೌಡ, ಡಾ. ಎಚ್.ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿವಿಷ್ಣುವರ್ಧನ್ ಅಭಿನಯದ ಚಿತ್ರದ ಗೀತೆಗಳಿಗೆ ಸಮೂಹ ನೃತ್ಯ ಹಾಗೂ ವಿಷ್ಣು ಚಿತ್ರ ಜೀವನದ ಬಗ್ಗೆ ರಸಪ್ರಶ್ನೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜೀವನ ಜ್ಯೋತಿ ಕಿವುಡು ಹಾಗೂ ಮೂಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಎಸ್.ಎಂ.ಪ್ರಸಾದ್ ನಿರೂಪಿಸಿದರು.
ಕೆಎಸ್ಒಯು ವತಿಯಿಂದ ಸಂವಾದ
ಹಾಸನ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು-06, ಇವರು ವಿದ್ಯಾರ್ಥಿಗಳಿಗಾಗಿ ಸೆ.29ರಂದು ರಾತ್ರಿ 8 ಕ್ಕೆ ಆಕಾಶವಾಣಿ-ಯುವವಾಣಿಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಹಾಸನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಪಿ. ಹರೀಶ್ ಭಾಗವಹಿಸುವರು. ಕಾರ್ಯಕ್ರಮವನ್ನು ಆಕಾಶವಾಣಿಯ ನಾರಾಯಣ ಭಟ್ ನಡೆಸಿಕೊಡಲಿದ್ದಾರೆ.