ಹಂದಿ ದಾಳಿ; ರೈತನ ಮರ್ಮಾಂಗಕ್ಕೆ ತೀವ್ರ ಗಾಯ
ಹೊಳೆನರಸೀಪುರ: ತಾಲೂಕಿನ ಮೆಣಗನಹಳ್ಳಿ ಗ್ರಾಮದ ರೈತರೊಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿ ಏಕಾಏಕಿ ಮೇಲೆರಗಿ ದಾಳಿ ಮಾಡಿರುವ ಪರಿಣಾಮವಾಗಿ ರೈತನ ಮರ್ಮಾಂಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಗಾಯಗೊಂಡಿರುವ ರೈತನಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.
ಮೆಣಗನಹಳ್ಳಿಯ ಕಾಡುಹಂದಿಯ ದಾಳಿಗೆ ಸಿಲುಕಿ ಗಾಯಗೊಂಡಿರುವ ರೈತನನ್ನು ಮೆಣಗನಹಳ್ಳಿಯ ತಮ್ಮಯ್ಯ (65) ಎಂದು ಹೇಳಲಾಗಿದೆ. ಈತ ಬುಧವಾರ ಸಂಜೆ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ದಾಳಿ ಮಾಡಿರುವ ದೊಡ್ಡ ಕಾಡು ಹಂದಿ ತಮ್ಮಯ್ಯನ ಮೈಮೇಲೆ ಎರಗಿದ್ದಲ್ಲದೆ ಏಕಾಏಕಿ ದಾಳಿ ಮಾಡಿದ ಸಂದರ್ಭದಲ್ಲಿ ಕಾಡುಹಂದಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ರೈತನ ಮರ್ಮಾಂಗಕ್ಕೂ ಕಾಡುಹಂದಿ ಕಚ್ಚಿರುವ ಪರಿಣಾಮವಾಗಿ ತಮ್ಮಯ್ಯ ಅವರ ಮರ್ಮಾಂಗಕ್ಕೆ ತೀವ್ರವಾದ ಗಾಯಗಳಾಗಿದೆ. ತಮ್ಮಯ್ಯ ಅವರು ಸಹಾಯಕ್ಕಾಗಿ ಕಿರುಚಿಕೊಂಡಾಗ ಅಕ್ಕ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರುಗಳು ಓಡಿಬಂದು ತಮ್ಮಯ್ಯನನ್ನು ರಕ್ಷಿಸುವಷ್ಟರಲ್ಲಿ ಕಾಡುಹಂದಿಯು ತಮ್ಮಯ್ಯನ ಮೇಲೆ ತೀವ್ರವಾಗಿ ದಾಳಿ ನಡೆಸಿ ರೈತರ ಕೂಗಾಟಕ್ಕೆ ಬೆದರಿ ಓಡಿಹೋಗಿದೆ.
ಹಂದಿ ದಾಳಿಯಲ್ಲಿ ಕಿತ್ತುಹೊಗಿದ್ದ ತಮ್ಮಯ್ಯನ ಮರ್ಮಾಂಗಕ್ಕೆ ವೈದ್ಯರು ಸುಮಾರು ಹದಿನೈದು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಪ್ರಕಾರ ತೀವ್ರ ಗಾಯಗೊಂಡಿದ್ದರೂ ಪ್ರಾಣಾಪಾಯ ಇಲ್ಲವೆಂದು ಹೇಳಿದ್ದಾರೆ.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಗುರುವಾರ 3811 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.66 ಅಡಿಯಾಗಿದ್ದು, 36.774 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 125 ಕ್ಯುಸೆಕ್ ಹೊರ ಹರಿವು ನಾಲೆಗೆ 100 ಕ್ಯುಸೆಕ್ ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3167.51 ಅಡಿ, ಒಳ ಹರಿವು 25 ಕ್ಯುಸೆಕ್, ಹೊರ ಹರಿವು ನಾಲೆಗೆ 115 ಕ್ಯುಸೆಕ್ ಒಟ್ಟು 1.400 ಟಿಎಂಸಿ ನೀರು ಸಂಗ್ರಹವಾಗಿದೆ.
ಮಳೆ ವಿವರ: ಬೇಲೂರು 0.8 ಮಿ.ಮೀ, ಸಕಲೇಶಪುರ 1.4, ಮಾರನಹಳ್ಳಿ 4.0, ಹಾನಬಾಳು 8.4, ಬೆಳಗೋಡು 2.4ಮಿ.ಮೀ ಮಳೆಯಾಗಿದೆ. ಬೇಲೂರು 0.8, ಹಳೇಬೀಡು 4.6, ಮಿಮೀ.ಮಳೆಯಾಗಿದೆ. ಅರಸೀಕೆರೆ ತಾಲೂಕಿನ ಕಣಕಟ್ಟೆ 2.2, ಹಾಸನ ತಾಲೂಕು ಸಾಲಗಾಮೆಯಲ್ಲಿ 1.2 ಮಿಮೀ ಮಳೆಯಾಗಿದೆ.