ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್‌ನ ರಾಜಕೀಯ ನಾಟಕ: ಅಶೋಕ್

Srinivasa Murthy VN
Updated On : 28 Sept 2013, 10:43 am

ಕನ್ನಡಪ್ರಭ ವಾರ್ತೆ ಹಾಸನ ಸೆ. 28
ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಅದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ  ತಿರಿಸ್ಕರಿಸಿ, ಹರಿದು ಬಿಸಾಡಿ ಎನ್ನುವ ಮೂಲಕ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದರು.
  ನಗರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸುಗ್ರಿವಾಜ್ಞೆ ಮಸೂದೆ ಬೇಕು ಅಂತ ಕೋರ್ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ.
  ಅದೇ ಅವರ ಪುತ್ರ ರಾಹುಲ್ ಆ ಸುಗ್ರಿವಾಜ್ಞೆಯನ್ನು ತಿರಸ್ಕರಿಸಿ ಹರಿದು ಬಿಸಾಡಿ ಎನ್ನುವ ಮೂಲಕ ರಾಜಕೀಯ ನಾಟಕ ಆಡುತ್ತಿದ್ದಾರೆ. ಕಳಂಕಿತರನ್ನು ರಕ್ಷಿಸಲು ಅಮ್ಮ ಹೋರಾಡುತ್ತಿದ್ದರೆ, ಮಗ ಅಂತವರ ವಿರುದ್ಧ ಸಿಡಿಯುವಂತೆ ವರ್ತಿಸುತ್ತಿದ್ದಾರೆ. ಮಸೂದೆಯೊಂದನ್ನು ಈ ರೀತಿ ಹರಿದು ಬಿಸಾಡಿ ಎನ್ನುವ ಮೂಲಕ ದೇಶಕ್ಕೆ ಅವಮಾನಗೊಳಿಸಿದ್ದಾರೆ ಎಂದು ಅಶೋಕ್ ಕಿಡಿಕಾರಿದರು.  ಪ್ರಧಾನಿ ಮನಮೋಹನಸಿಂಗ್ ಅವರು ರಾಹುಲ್ ಹೇಳಿಕೆಯನ್ನು ತೀವ್ರವಾಗಿ ಪರಿಗಣಿಸುವುದಾಗಿ ಹೇಳುವ ಮೂಲಕ, ಸಿಂಗ್ ಕೇವಲ ಕೈಗೊಂಬೆಯಾಗಿದ್ದಾರೆ ಎಂದ ಅಶೋಕ್, ಯಾವುದೇ ಮಸೂದೆಯಾದರೂ ಅದನ್ನು ಸಂಸತ್‌ನಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಆದರೆ ಸುಗ್ರೀವಾಜ್ಞೆಯನ್ನು ತರಾತುರಿಯಲ್ಲಿ ಮಾಡಿದ್ದಾರೆ.
 ಲಾಲು ಪ್ರಸಾದ್ ಯಾದವ್ ಹಗರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬೀಳುವ ದಿನ ಹತ್ತಿರ ವಾಗುತ್ತಿರುವುದರಿಂದ ಅವರನ್ನು ಬಚಾವ್ ಮಾಡಲು ಕಾಂಗ್ರೆಸ್ ಈ ತಂತ್ರವನ್ನು ರೂಪಿಸಿದೆ ಎಂದು ದೂರಿದರು.
ಪ್ರಧಾನಿ ರಾಜೀನಾಮೆಗೆ ಒತ್ತಾಯ: ಪಾಕ್ ಉಗ್ರರು ದೇಶದೊಳಗೆ ನುಗ್ಗಿ ಸೈನಿಕರ ಶಿರವನ್ನು ಕತ್ತರಿಸಿ ದೇಹವನ್ನು ಮಾತ್ರ ಕಳುಸಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಸೈನಿಕರಲ್ಲಿ ಧೈರ್ಯ ತುಂಬುವಂತಹ ಕಾರ್ಯ ಮಾಡದೇ ಮೌನ ವಹಿಸಿದ್ದಾರೆ. ಜೊತೆಗೆ ರಕ್ಷಣಾ ಸಚಿವರು ಒಮ್ಮೆ ಪಾಕಿಸ್ತಾನಿ ಸೈನಿಕರು ಈ ಕೃತ್ಯ ಎಸಗಿಲ್ಲ ಎನ್ನುತ್ತಾರೆ. ಆದೇ ಸಂಸತ್‌ನಲ್ಲಿ ಪಾಕಿಸ್ತಾನಿ ಸೈನಿಕರೆ ಈ ಕೃತ್ಯ ಎಸಗಿದ್ದಾರೆ ಎನ್ನುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
  ದೇಶದ ಜನತೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತದಿಂದ ಬೇಸತ್ತಿದ್ದು, ಕಾಂಗ್ರೆಸ್‌ನ್ನು ಜನ ಸಂಪೂರ್ಣವಾಗಿ ಬೇಡವೆಂದು ತೀರ್ಮಾನಿಸಿ ಶವದ ಪಟ್ಟಿಗೆಯಲ್ಲಿ ಹಾಕಿ ಮೊಳೆ ಹೊಡೆದಿದ್ದಾರೆ. ಜನ ಇನ್ನೊಂದು ಮೊಳೆ ಹೊಡೆಯಬೇಕಾಗಿದ್ದು, ಚುನಾವಣೆ ವೇಳಾಪಟ್ಟಿ ಬಂದ ನಂತರ ಶವದ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇಶಾದ್ಯಂತ ಮೋದಿ ಅಲೆ: ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ರುಪಾಯಿ ಮೌಲ್ಯ ಕುಸಿತ, ಏರಿಕೆ ಹಾಗೂ ಅಭಿವೃದ್ಧಿ ಕುಂಟಿತದಿಂದಾಗಿ ಬೇಸತ್ತಿರುವ ಜನತೆ ದೇಶದ ಅಭಿವೃದ್ಧಿಗೆ ಸಮರ್ಥ ನಾಯಕನೊಬ್ಬನ ಅವಶ್ಯಕತೆ ಇರುವುದನ್ನು ಅರಿತು, ಮೋದಿ ಪ್ರಧಾನಿ ಆಗಬೇಕೆಂದು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ಕಿತ್ತಾಕಬೇಕು ಅಂತಿದ್ದಾರೆ. ದೇಶಾದ್ಯಂತ ನರೇಂದ್ರ ಮೋದಿ ಅಲೆ ಎದ್ದಿದ್ದು, ನಾವು ಸಹ ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಪೆಕ್ರ ಪೆಕ್ರನಂತೆ ಆಡುವ ರಾಹುಲ್ - ಸಿ.ಟಿ.ರವಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಅವರು, ಕಾಂಗ್ರೆಸ್‌ನವರದ್ದು ಕುಟುಂಬ ರಾಜಕಾರಣ. ಹಿಂದೆ ನೆಹರು ಪ್ರಧಾನಿಯಾಗಿದ್ದರು, ನಂತರ ಅವರ ಮಕ್ಕಳು ದೇಶದಲ್ಲಿ ಆಡಳಿತ ನಡೆಸಿದರು. ನಂತರ ಇಂದಿರಾಗಾಂಧಿ ಪ್ರಧಾನಿಯಾದರು, ನಂತರ ರಾಜೀವ್‌ಗಾಂಧಿ ಆಳ್ವಿಕೆ ನಡೆಸಿದರು. ತದ ನಂತರ ಸೋನಿಯಾಗಾಂಧಿ ದೇಶದ ಆಡಳಿತ ನಿಯಂತ್ರಣ ಮಾಡುತ್ತಿದ್ದಾರೆ. ಈಗ ಪೆಕ್ರ ಪೆಕ್ರನಂತೆ ಆಡುವ ರಾಹುಲ್
ಗಾಂಧಿಯನ್ನು ಮುಂದಿನ ನಾಯಕ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್‌ನಲ್ಲಿ ರಾಜಕೀಯ ದಾರಿದ್ರ್ಯ ಉಂಟಾಗಿದೆ ಎಂದು ಟೀಕಿಸಿದರು.
 ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಬಲ ನಾಯಕರ ಅವಶ್ಯಕತೆ ಇದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಇದು ಕೇವಲ ಬಿಜೆಪಿಗೆ ಬೇಕಾಗಿಲ್ಲ, ಈಡೀ ದೇಶಕ್ಕೆ ಬೇಕಾಗಿದೆ. ದೇಶದ ಒಳಗಿನ ಮತ್ತು ಹೊರಗಿನ ಶತ್ರುಗಳನ್ನು ನಿರ್ನಾಮ ಮಾಡಲು ಮೋದಿ ಅಧಿಕಾರಕ್ಕೆ ಬರಬೇಕಾಗಿದ್ದು, ಎಲ್ಲರೂ ಅವರನ್ನು ಬೆಂಬಲಿಸಬೇಕಾದ್ದು ಅನಿವಾರ್ಯ ಎಂದು ಹೇಳಿದರು.
 ಜಿಲ್ಲಾಧ್ಯಕ್ಷ ರೇಣು ಕುಮಾರ್, ಜಿಪಂ ಸದಸ್ಯ ಅಮಿತ್‌ಶೆಟ್ಟಿ ಮುಖಂಡ ನವಿಲೆ ಅಣ್ಣಪ್ಪ, ಕೃಷ್ಣೇಗೌಡ, ಗುರು ಪ್ರಸಾದ್, ಪ್ರಸನ್ನ ಕುಮಾರ್, ಕುಮರ್, ಚೆನ್ನಶೆಟ್ಟಿ ಇತರರು ಸಮಾವೇಶದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement