ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಉದ್ಘಾಟನೆ
ಹಾಸನ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವೇದಿಕೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಉತ್ತಮ ಕೆಲಸ ನಿರ್ವಹಿಸಲಿ ಎಂದು ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾಆನಂದ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ನಾನಾ ಕುಂದು ಕೊರತೆಗಳಿದ್ದು, ಎಲ್ಲವನ್ನೂ ಪೊಲೀಸರಿಗೆ ದೂರು ಕೊಡಲು ಹಿಂಜರಿಯುತ್ತಾರೆ. ಹಿತರಕ್ಷಣಾ ವೇದಿಕೆ ಮೂಲಕ ನ್ಯಾಯ ಪಡೆಯಲು ಅನೇಕರು ಮುಂದಾಗುತ್ತಾರೆ ಎಂದು ಹೇಳಿದರು. ದೊಡ್ಡಹಳ್ಳಿ ರಮೇಶ್ ತಂಡದವರಿಂದ ಜಾನಪದ ಗಾಯನ ನಡೆಯಿತು. ಬೇಲೂರಿನ ನೃತ್ಯಾಂಜಲಿ ಕಲಾ ತಂಡದ ಶೈಲಜಾ ಮತ್ತು ತಂಡದ ಚಂದನ, ಶೃಂಗಾ ಉಷಾ, ಪ್ರಜ್ಞಾ ಅವರಿಂದ ಭರತ ನಾಟ್ಯ ಪ್ರದರ್ಶಿಸಲಾಯಿತು. ಸಮಾಜ ಸೇವಕ ಮರಡಿ ಸೋಮಶೇಖರ್, ಜಿಲ್ಲಾ ಕಾರ್ಯನಿರತ ಪತ್ರಕತಎರ ಸಂಘದ ಅಧ್ಯಕ್ಷೆ ಲೀಲಾವತಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಾಹಿತಿಗಳು ತಿ. ರಾಮಕೃಷ್ಣಯ್ಯ(ತಿರಾಕ), ಮುಖ್ಯೋಪಾಧ್ಯಾಯ ಎಸ್.ಆರ್. ಶ್ರೀರಂಗಯ್ಯ, ಜೀವನ ಕೌಶಲ್ಯ ತರಬೇತಿ ಕೇಂದ್ರದ ಡಿ.ಎಂ. ಜಯಮ್ಮ ಕೃಷ್ಣೇಗೌಡ, ಸಮಾಜ ಸೇವಕರಾದ ಸಾವಿತ್ರಿ ಶಂಕರೇಗೌಡ, ಅಶೋಕ್, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಧರಣೇಶಗೌಡ, ಪ್ರಧಾನ ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಕುಮಾರ್ಗವೇನಹಳ್ಳಿ ಇತರರು ಇದ್ದರು. ವೇದಿಕೆ ಸಂಸ್ಥಾಪಕ ಅಧ್ಯಕ್ಷ ಗಂಜಲಗೋಡು ಗೋಪಾಲಗೌಡ ಸ್ವಾಗತಿಸಿ, ವಂದಿಸಿದರು.
'ವನಮಹೋತ್ಸವ ಪ್ರತಿದಿನ ಆಚರಿಸೋಣ'
ಹಾಸನ: ವನಮಹೋತ್ಸವ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿ ದಿನವೂ ಆಚರಿಸುವಂತಾಗಬೇಕು ಎಂದು ಹಾಸನ ಕೃಷಿ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ನಾರಾಯಣಸ್ವಾಮಿ ಹೇಳಿದರು. ಕೃಷಿ ಮಹಾವಿದ್ಯಾಲಯದಿಂದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ನಡೆದ ವನಮಹೋತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.ಶಿಬಿರದ ಉಸ್ತುವಾರಿ ವಹಿಸಿದ್ದ ತೋಟಗಾರಿಕೆ ತಜ್ಞ ಡಾ. ಸಿದ್ದಗಂಗಯ್ಯ ಅವರು ಜೀವ ಜಲ ಹಾಗೂ ಜೀವ ಅನಿಲದ ಪರಿಶುದ್ಧತೆ ಕಾಪಾಡುವುದು ನಮ್ಮ ಹೊಣೆ ಎಂದು ಹೇಳಿದರು. ಪರಿಸರ ಸಂರಕ್ಷಣೆ ಬಗ್ಗೆ ಪ್ರಹಸನದ ಮೂಲಕ ವಿದ್ಯಾರ್ಥಿ ಅರ್ಜುನ್, ಅಂಬರೀಷ್, ಅಕ್ಷತಾಶೆಟ್ಟಿ, ಅಕ್ಷಿತಾ ಅನ್ನಪೂರ್ಣ ಹಾಗೂ ಅಭಿಲಾಷ ತಿಳಿಸಿಕೊಟ್ಟರು.