ಭಗತ್‌ರನ್ನು ಮರೆತ ಯುವ ಜನತೆ: ವಿಷಾದ
ಕನ್ನಡಪ್ರಪಭ ವಾರ್ತೆ ಹಾಸನ ಸೆ.28
ಇಂದಿನ ದಿನಗಳಲ್ಲಿ ಚಲನಚಿತ್ರ ನಟರನ್ನು ನೆನಪಿಸಿಕೊಳ್ಳುವ ಯುವಜನತೆ ಭಗತ್‌ಸಿಂಗ್‌ರನ್ನು ಮರೆಯುತ್ತಿರುವುದು ವಿಷಾದನೀಯ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಹೇಳಿದರು.
ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್, ಭಾರತ ವಿದ್ಯಾರ್ಥಿ ಫೆಡರೇಶನ್, ಹಾಸನ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಭಗತ್‌ಸಿಂಗ್ 106ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಡಿವೈಎಫ್‌ಐ, ಎಸ್‌ಎಫ್‌ಐ ಸದಸ್ಯರು ಭಗತ್‌ಸಿಂಗ್ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಭಗತ್ ಹೆಸರು ನೆನಪಿನಲ್ಲಿ ಉಳಿಯುವಂತಾಗಲು ಇಲ್ಲಿನ ವೃತ್ತಕ್ಕೆ ಭಗತ್‌ಸಿಂಗ್ ಹೆಸರನ್ನಿಟ್ಟು ಸಾಮಾಜಿಕ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಭಗತ್‌ಸಿಂಗ್ ಕೇವಲ ವ್ಯಕ್ತಿಯಲ್ಲ. ಈ ದೇಶದ ಯುವಜನರ ಆಶಾಕಿರಣವಾಗಿದ್ದಾರೆ. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಭಗತ್ ಆಶಯಗಳನ್ನು ಡಿವೈಎಫ್‌ಐ, ಎಸ್‌ಎಫ್‌ಐ ಸದಸ್ಯರು ಜಾರಿಗೊಳಿಸಲು ಅವಿರತ ಪ್ರಯತ್ನ ಪಡುತ್ತಿರುವುದು ಮೆಚ್ಚತಕ್ಕ ವಿಚಾರ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಶ್ರೀವಿದ್ಯಾ ಮಾತನಾಡಿ, ವೃತ್ತಕ್ಕೆ ಭಗತ್‌ಸಿಂಗ್ ಹೆಸರು ಅಧಿಕೃತಗೊಳಿಸುವ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಿವೈಎಫ್‌ಐ ಅಧ್ಯಕ್ಷ ಗಿರೀಶ್ ಮಾತನಾಡಿ, ಕೋಮುವಾದಿ ಶಕ್ತಿಗಳು ಭಗತ್‌ಸಿಂಗ್ ಹೆಸರು ಮತ್ತು ಫೋಟೋ ಬಳಸುತ್ತ ಅವರಿಗೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದರು.
ಜಿಲ್ಲಾ ಕಾರ್ಯದರ್ಶಿ ಶಾವಲ್ ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ್ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು.