ತೀರ್ಥಂಕರ ಸಂದೇಶ ಸಾರ್ವಕಾಲಿಕ
ಶ್ರವಣಬೆಳಗೊಳ: ಅಹಿಂಸಾ ಪರಮೋಧರ್ಮ ಎಂದು ಸಾರಿದ ಜೈನ ತೀರ್ಥಂಕರರ ಸಂದೇಶಗಳು ಇಡೀ ಜಗತ್ತಿಗೆ ಸರ್ವಕಾಲಿಕವಾಗುವ ಅಗತ್ಯವಿದೆ ಎಂದು ಶ್ರೀ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಭಗವಾನ್ ಮಹಾವೀರ ತೀರ್ಥಂಕರರ 2613ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟನೆ ಹಿನ್ನೆಲೆಯಲ್ಲಿ 24 ತೀರ್ಥಂಕರರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಜೈನಧರ್ಮದಲ್ಲಿರುವ 24 ತೀರ್ಥಂಕರರೂ ಅಹಿಂಸೆ ಉಪದೇಶ ಮಾಡಿದ್ದಾರೆ. ಒಬ್ಬರ ಉಪದೇಶಕ್ಕೂ ಇನ್ನೊಬ್ಬರ ಉಪದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇದಕ್ಕೆ ಕಾರಣ ಪರಿಪೂರ್ಣವಾಗಿ ಅಹಿಂಸೆಯನ್ನು ಪ್ರತಿಪಾದನೆ ಮಾಡುವುದು ಅವರ ಮೂಲ ಉದ್ದೇಶವಾಗಿತ್ತು ಎಂದರು.
ಕಾರ್ಯಕ್ರಮ: ಇದೇ ತಿಂಗಳು 13ರಂದು ದೇಶಾದ್ಯಂತ ಮಹಾವೀರ ಜಯಂತಿ ನಡೆಯಲಿದೆ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾವು ಒಂದು ವಾರ ಮುಂಚಿತವಾಗಿ ಚೈತ್ರಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಇದರ ಉದ್ದೇಶ ಜಯಂತಿ ಕಾರ್ಯಕ್ರಮ ಚೆನ್ನಾಗಿ ನಡೆಯಬೇಕು ಎಂಬುದಾಗಿದೆ ಎಂದರು.
ಕರೆ: ಜಗತ್ತಿನ ಎಲ್ಲರೂ ಸುಖವಾಗಿರಬೇಕು. ಸರ್ವಪ್ರಜೆಗಳಲ್ಲಿ ಯಾರೂ ದುಃಖಿಗಳಾಗಿರಬಾರದು ಎಂಬುದನ್ನು ಮಹಾವೀರರು ತಮ್ಮ ಸಂದೇಶದಲ್ಲಿ ಸಾರಿದ್ದಾರೆ. ಅಹಿಂಸಾ ಸಂದೇಶಗಳ ಉಪದೇಶ ಮತ್ತು ಆಚರಣೆ ಹಾಗೂ ಮಾರ್ಗದರ್ಶನದಲ್ಲಿ ಯಾವುದೇ ಜಾತಿ, ಮತ, ಪಂಥದ ಬೇಧ ಇರಬಾರದು. ರಾಜ ಮಹಾರಾಜರು, ಪ್ರಜಾಪತಿಗಳು ಸೇರಿದಂತೆ ಭೂಮಿ ಆಳುವವರೆಲ್ಲಾ ಧಾರ್ಮಿಕರಾಗಿಬೇಕು ಅನ್ನೋದು ಮಹಾವೀರರ ಪ್ರತಿಪಾದನೆಯಾಗಿತ್ತು ಎಂದು ಹೇಳಿದರು.
ನಂತರ ನಡೆದ ಚಾವುಂಡರಾಯ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅಜಿತ್ ಜಿ. ಗುಂಜಾಳ್ ಉದ್ಘಾಟಿಸಿದರು. ಆಚಾರ್ಯ ಶ್ರೀ ಸಚ್ಚಿದಾನಂದ ಮಹಾರಾಜರು, ಶ್ರುತನಂದಿ ಮಹಾರಾಜರು ಪಾವನ ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಅನಿಲ್ ಜಿ ಸೇಠಿ, ನಿಹಾಲ್ ಚಂದ್ ಜಿ. ಜೈನ್, ವಿನೋದ್ ಕುಮಾರ್ ಬಾಕ್ಲಿವಾಲ್, ಅಶೋಕ್ ಕುಮಾರ್ ಸೇಠಿ, ವಿಶೇಷ ಆಹ್ವಾನಿತರಾಗಿ ಬಿಜಾಪುರದ ಡಿ.ಆರ್. ಶಹಾ, ಹಾಸನ ಜೈನ ಸಂಘದ ಅಜಿತ್ ಕುಮಾರ್ ಆಗಮಿಸಿದ್ದರು. ಕರ್ನಾಟಕ ಜೈನ ಸಂಘದ ಅಧ್ಯಕ್ಷರಾದ ಜಿತೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು.