ತೃತೀಯ ತಡೆ ಅಸಾಧ್ಯ
ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ, ಏ. 8
ದೇವೇಗೌಡ್ರು ಗೆದ್ರೆ ಮತ್ತೊಮ್ಮೆ ಪ್ರಧಾನಿ ಆಯ್ತಾರೆ. ಅದೇ ಮಂಜು ಗೆದ್ರೆ ಏನಾಯ್ತಾರೆ ಗೊತ್ತಾ ? ಇವ್ರು ಎನ್‌ಡಿಎ ಕಡೆಗೇ ನೆಗೀಬೇಕು ಅಷ್ಟೇ. ಈ ದೇಶದಲ್ಲಿ ತೃತೀಯ ರಂಗದ ಅಸ್ತಿತ್ವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ನುಡಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿರುವ ಎ.ಮಂಜು ಅವರಿಗೆ ಕೆಲಸ ಮಾಡಲು ಇನ್ನೂ 4 ವರ್ಷ ಸಮಯ ಇದ್ದು, ಅಷ್ಟರಲ್ಲಿ ಇಡೀ ಜಿಲ್ಲೆಯದು ಬೇಡ, ಅವರ ಕ್ಷೇತ್ರವಾದ ಅರಕಲಗೂಡು ತಾಲೂಕಿನ ರಸ್ತೆಗಳ ಗುಂಡಿ ಮುಚ್ಚಿ, ಕ್ಷೇತ್ರದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಕೊಟ್ಟು ಅಮೇಲೆ ಬೇಕಿದ್ದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಳುಗುವ ಹಡಗು: ಲೋಕಸಭಾ ಚುನಾವಣೆಯ ನಂತರ ಜೆಡಿಎಸ್ ಸಾಯಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ. ಆದರೆ ಚುನಾವಣೆಯ ಫಲಿತಾಂಶ ಬಂದ ಮೇಲೆ ಕಾಂಗ್ರೆಸ್‌ನ ಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದ ಅವರು, ಚುನಾವಣೆಯ ನಂತರ ಕಾಂಗ್ರೆಸ್ ಮುಳುಗುವ ಹಡಗಾಗಲಿದ್ದು 3ನೇ ಶಕ್ತಿಯ ಉದಯವಾಗಲಿದೆ. ರಾಜ್ಯದಲ್ಲಿ ಜೆಡಿಎಸ್ 9ರಿಂದ 12 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂಬ ವಿಶ್ವಾಸದ ನುಡಿಗಳನ್ನಾಡಿದರು.
ದ್ವೇಷ ರಾಜಕಾರಣ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ತಿಂಗಳಾದರೂ ಅದೇ ಪಕ್ಷದ ಶಾಸಕರಾಗಿರುವ ಎ. ಮಂಜು ಅವರಿಗೆ ಅವರ ತಾಲೂಕಿನ ಗುಂಡಿ ಮಚ್ಚಲು ಸಾಧ್ಯವಾಗಿಲ್ಲ. ಅದು ಬಿಟ್ಟು ಮಾಜಿ ಪ್ರಧಾನಿ ಕುಟುಂಬದವರು ಈ ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಇದೇ ಕಾಂಗ್ರೆಸ್ ಸರ್ಕಾರ ಹಾಸನ-ಬೆಂಗಳೂರು ನಡುವಿನ ರೇಲ್ವೇ ಮಾರ್ಗವನ್ನು ಪೂರ್ಣಗೊಳಿಸಲು ಸಹಕಾರ ನೀಡಲಿಲ್ಲ.
ಹೊಳೆನರಸೀಪುರ ರೈಲ್ವೇ ನಿಲ್ದಾಣಕ್ಕೆ ಇದುವರೆವಿಗೂ ಪ್ಲಾಟ್ ಫಾರಂ ನಿರ್ಮಾಣಕ್ಕೆ ಅನುದಾನ ನೀಡಲಿಲ್ಲ. ಹಾಸನದಲ್ಲಿ ಆಲೂಗಡ್ಡೆ ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಸಹಕಾರ ನೀಡಲಿಲ್ಲ ಅಲ್ಲದೇ ಇವರದೇ ಸರ್ಕಾರ ಇದ್ದರೂ ಹಾಸನದಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿ ಏಕೆ ಫ್ಲೈಓವರ್ ನಿರ್ಮಿಸಿಕೊಡಲು ಮುಂದಾಗಲಿಲ್ಲ ಎಂದು ರೇವಣ್ಣ ಕಾಂಗ್ರೆಸ್‌ನ ದ್ವೇಷ ರಾಜಕಾರಣದ ಕುರಿತಂತೆ ಕಿಡಿಕಾರಿದರು.
ಮಂಜು ಉತ್ತರಿಸಲಿ: ಕಾಂಗ್ರೆಸ್ ಅಭ್ಯರ್ಥಿ ಮಂಜು ಅವರು, ಅರಕಲಗೂಡು ತಾಲೂಕಿನ ಅಭಿವೃದ್ಧಿಗೆ ಮಾಡಿರುವ ಕೆಲಸಗಳ ಬಗ್ಗೆ ಸಾರ್ವಜನಿಕವಾಗಿ ಹೇಳಲಿ ಎಂದು ಸವಾಲು ಹಾಕಿದ ರೇವಣ್ಣ, ಕೆ-ಶಿಪ್ 2ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿಶ್ವ ಬ್ಯಾಂಕ್ ನೆರವಿನಿಂದ ಹಾಸನ-ಗೊರೂರು-ಅರಕಲಗೂಡು-ರಾಮನಾಥಪುರ ಮಾರ್ಗದ 77 ಕಿಮೀ ರಸ್ತೆಯನ್ನು ರು. 192 ಕೋಟಿಗಳಲ್ಲಿ ಕಾಮಗಾರಿಗೆ ಮಂಜೂರು ಕೊಡಿಸಿದ್ದು ನಾನು. ಆದರೆ, ಇದುವರೆವಿಗೂ ಆ ರಸ್ತೆಯನ್ನು ಅಭಿವೃದ್ಧಿ ಮಾಡಲು ಇವರಿಗೆ ಸಾಧ್ಯವಾಗದೇ ಹೋದದ್ದು ಏಕೆ ಎಂದು ಪ್ರಶ್ನಿಸಿದರು.
ಸವಾಲು: ಕೇವಲ ದುರುದ್ದೇಶದ ರಾಜಕಾರಣಕ್ಕಷ್ಟೇ ಸೀಮಿತವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಮ್ಮ ಅವಧಿಯಲ್ಲಿ ಮಂಜೂರು ಮಾಡಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡದ ಕಾರಣದಿಂದಾಗಿಯೇ, ಹೊಳೆನರಸೀಪುರ-ಹಳ್ಳಿಮೈಸೂರು-ಸಾಲಿಗ್ರಾಮ-ಕೆ.ಆರ್. ನಗರ ನಡುವಿನ ರಸ್ತೆಗಾಗಿ ಮಂಜೂರು ಮಾಡಿಸಲಾಗಿದ್ದ ರು. 115ಕೋಟಿ ಕಾಮಗಾರಿ, ಹಿರೀಸಾವೆ-ಹೊಳೆನರಸೀಪುರ-ಅರಕಲಗೂಡು ಮಾರ್ಗವಾಗಿ ಶನಿವಾರಸಂತೆವರೆಗೆ ರಾಷ್ಟ್ರೀಯ ಹೆದ್ದಾರಿ-8ರ ಅಡಿಯಲ್ಲಿ ದ್ವಿಪಥ ರಸ್ತೆ ಕಾಮಗಾರಿಗಾಗಿ ನೀಡಲಾದ ರು. 63 ಕೋಟಿ ಕಾಮಗಾರಿ ಶನಿವಾರಸಂತೆಯವರೆಗೂ ಪೂರ್ಣಗೊಳ್ಳದೇ ಅರಕಲಗೂಡಿನಲ್ಲೇ ನಿಂತದ್ದು ಏಕೆ ಎಂಬುದನ್ನು ಮಾನ್ಯ ಶಾಸಕ ಎ. ಮಂಜು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಚುನಾವಣೆ ಕಳೆದ ಕೂಡಲೇ ದುದ್ದ-ಹಾಸನ ನಡುವಿನ ರಸ್ತೆಯನ್ನು ಅಭಿವೃದ್ಧಿಪಡಿಸದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಶಾಸಕರಾಗಿರುವ ಎ. ಮಂಜು ಅವರಿಗೆ ಕೆಲಸ ಮಾಡಲು ಇನ್ನೂ 4 ವರ್ಷ ಸಮಯ ಇದೆ. ಅಷ್ಟರಲ್ಲಿ ಅವರ ಕ್ಷೇತ್ರವಾದ ಅರಕಲಗೂಡು ತಾಲೂಕಿನ ರಸ್ತೆಗಳ ಗುಂಡಿ ಮುಚ್ಚಿ, ಕ್ಷೇತ್ರದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಿ. ಆಮೇಲೆ ಬೇಕಿದ್ದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿ.
-ಎಚ್.ಡಿ. ರೇವಣ್ಣ