ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

210 ಹೆಕ್ಟೇರ್‌ನಲ್ಲಿಬತ್ತ ಬಿತ್ತನೆ ಕಾರ್ಯ

Srinivasa Murthy VN
Updated On : 10 Apr 2014, 1:12 am

ಹೊಳೆನರಸೀಪುರ: 2013-14 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕುಂಠಿತಗೊಂಡಿದ್ದು, ಕೊಳವೆ ಬಾವಿ ಮತ್ತು ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ 210 ಹೆಕ್ಟೇರ್ ವಿಸ್ತೀರ್ಣದಲ್ಲಿ ಭತ್ತ ನಾಟಿಯಾಗಿದ್ದು, ಬೆಳೆಯು ಬೆಳವಣಿಗೆಯ ಹಂತದಲ್ಲಿರುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಯು.ಎಚ್. ಭಾನುಪ್ರಕಾಶ್ ತಿಳಿಸಿದ್ದಾರೆ.
ತಾಲೂಕಿನ ನಾನಾ ಕಡೆ, 10 ಹೆಕ್ಟೇರ್ ವಿಸ್ತೀರ್ಣದಲ್ಲಿ ರಾಗಿ ಬಿತ್ತನೆಯಾಗಿದ್ದು, ಬೆಳೆ ಬೆಳವಣಿಗೆ ಹಂತದಲ್ಲಿದೆ. ಮುಸುಕಿನ ಜೋಳ 15 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬೆಳೆಯು ಬೆಳವಣಿಗೆ ಮತ್ತು ಹೂ ಹಂತದಲ್ಲಿರುತ್ತದೆ. ನೆಲಗಡಲೆ ಬೆಳೆ 10 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬೆಳವಣಿಗೆ ಹಂತದಲ್ಲಿದೆ. ಕಬ್ಬು ಬೆಳೆ 110 ಹೆ. ಪ್ರದೇಶದಲ್ಲಿ ಕಟಾವು ಮಾಡಿ ಕೂಳೆ ಇದ್ದು, ಬೆಳೆಯು ಬೆಳವಣಿಗೆ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರೈತರು ಸಂಕಷ್ಟದಲ್ಲಿ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿ ತಿಂಗಳಿನಲ್ಲಿ 2 ಮಿ.ಮೀ, ಫೆಬ್ರವರಿ ತಿಂಗಳಿನಲ್ಲಿ 2 ಮಿ.ಮೀ ಹಾಗೂ ಮಾರ್ಚ್ ತಿಂಗಳಿನಲ್ಲಿ 9 ಮಿ.ಮೀನಷ್ಟು ವಾಡಿಕೆ ಮಳೆಯ ನಿರೀಕ್ಷೆ ಇತ್ತಾದರೂ, ಈ ಮೂರು ತಿಂಗಳುಗಳಲ್ಲಿಯೂ ಸರಾಸರಿ ಮಳೆಯೂ ಬೀಳದೆ ಇರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
2014ರ ಮಾರ್ಚ್ ಮಾಸಾಂತ್ಯಕ್ಕೆ ವಾಡಿಕೆ ಮಳೆ 13 ಮಿ.ಮೀ. ಬರಬೇಕಾಗಿತ್ತು. ಮಾ. 27ರಂದು ಕಸಬಾ ಹೋಬಳಿಯಲ್ಲಿನ ಕೆಲವೆಡೆಗಳಲ್ಲಿ ತುಂತುರು ಮಳೆಯಾಗಿದ್ದು ಬಿಟ್ಟರೆ ಉಳಿದಂತೆ ಉಳುಮೆ ಮತ್ತು ಬಿತ್ತನೆಗೆ ಅನುಕೂಲಕರವಾದ ಮಳೆ ಬಂದಿಲ್ಲ ಎಂದು ಕೃಷಿ ನಿರ್ದೇಶಕರು ಮಳೆ ಬಗ್ಗೆ ಮಾಹಿತಿ ನೀಡಿದರು.
ಏಪ್ರಿಲ್‌ನ ಮೊದಲವಾರದಲ್ಲಿ ವಾಡಿಕೆ ಮಳೆ 59 ಮಿ.ಮೀ ಇತ್ತು. ಮಳೆ ಇಲ್ಲದೆ ಇರುವುದರಿಂದ ಕೃಷಿಗಾಗಿ ಭೂಮಿ ಸಿದ್ಧತೆ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದ ಭಾನುಪ್ರಕಾಶ್, ತಕ್ಷಣ ಮಳೆ ಬಂದಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ, ಹೆಸರು, ಉದ್ದು, ಎಳ್ಳು ಮತ್ತು ತಂಬಾಕು ಬೆಳೆಗಳ ಬಿತ್ತನೆ ಹಾಗೂ ನಾಟಿಗೆ ಅನುಕೂಲವಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement