ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ
ಅರಸೀಕೆರೆ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಹೊಯ್ಸಳೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ. ಸರೋಜಮ್ಮ ಅಭಿಪ್ರಾಯಪಟ್ಟರು. ಪಟ್ಟಣದ ಹೊಯ್ಸಳೇಶ್ವರ ಪದವಿ ಕಾಲೇಜಿಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಟಿ. ಸರೋಜಮ್ಮ ಮೇ. 31ರಂದು ಸೇವೆಯಿಂದ ನಿವೃತ್ತಿಗೊಳ್ಳಲಿರುವ ಹಿನ್ನೆಲೆಯಲ್ಲಿ ಅವರಿಗೆ ಕಾಲೇಜು ವಿದ್ಯಾರ್ಥಿಗಳ ವತಿಯಿಂದ ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗುರುವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ತಾವು ಪಡೆದ ಶಿಕ್ಷಣದ ಸಹಾಯದಿಂದ ತಂದೆ-ತಾಯಂದಿರಿಗೆ, ಗುರು ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮುಂದಿನ ಜೀವನದ ಬಗ್ಗೆ ಆಲೋಚಿಸಿ ಉತ್ತಮ ಮಾರ್ಗದತ್ತ ಮುನ್ನಡೆಯಬೇಕಿದೆ ಎಂದ ಅವರು, ತಮ್ಮ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿವೃತ್ತ ಪ್ರಾಂಶುಪಾಲ ಡಿ. ಶಿವಸ್ವಾಮಿ, ಹಿರಿಯ ಪ್ರಾಧ್ಯಾಪಕ ಕೆ.ಎಸ್.ಜಯದೇವಪ್ಪ, ಎ.ಬಿ.ವಿ.ಪಿ. ವಿದ್ಯಾರ್ಥಿ ಮುಖಂಡ ಮಂಜುನಾಥ್, ವಿದ್ಯಾರ್ಥಿನಿಯರಾದ ಚಂದ್ರಕಲಾ, ನಂದಿನಿ ಮೆಳವಂಕಿ, ಪ್ರಿಯಾಂಕ ಕೆ ನಾಯಕ್, ಪವಿತ್ರ, ಇನ್ನಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕ ಶಿವಲಿಂಗಪ್ಪ ಸೇರಿದಂತೆ ಹಿರಿ- ಕಿರಿಯ ಅಧ್ಯಾಪಕ ವೃಂದ ಪಾಲ್ಗೊಂಡಿತ್ತು. ಅಂತಿಮ ಬಿ.ಎ. ವಿದ್ಯಾರ್ಥಿನಿ ಪ್ರಿಯಾಂಕ ನಿರೂಪಿಸಿ, ನಗ್ಮಾಬಾನು ಸ್ವಾಗತಿಸಿ, ಮಂಜು ವಂದಿಸಿದರು.