'ಜನಹಿತಕ್ಕೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಗೌಡರು'
ಕ.ಪ್ರ.ವಾರ್ತೆ ಬೇಲೂರು ಏ. 9
ರಾಜ್ಯ ರಾಜಕೀಯ ಪಕ್ಷಗಳ ಅನೇಕ ಮುಖಂಡರು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಗೌಡರ ಕುಟುಂಬ ಜನಹಿತಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ ಎಂದು ಭವಾನಿ ರೇವಣ್ಣ ಪ್ರತಿಪಾದಿಸಿದ್ದಾರೆ.
ರೇವಣ್ಣ, ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಸ್ವಂತಕ್ಕಾಗಿ ಶಿಕ್ಷಣ ಸಂಸ್ಥೆ ತೆರೆಯಲಿಲ್ಲ ಎನ್ನುವುದ ಅವರ ಮಾತಿನ ತಾತ್ಪರ್ಯವಾಗಿತ್ತು. ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಎಚ್.ಡಿ. ದೇವೇಗೌಡರ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಇಂಜಿನಿಯರ್ ಕಾಲೇಜು ನಿರ್ಮಾಣ ಮಾಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಮಾಡಿದ್ದಾರೆ. ರೇವಣ್ಣ ಮಂತ್ರಿಯಾದ ಸಂದರ್ಭದಲ್ಲಿ ರಾಜ್ಯವನ್ನು ಒಂದು ಕಣ್ಣಿನಲ್ಲಿ ನೋಡಿದರೆ, ಇನ್ನೊಂದು ಕಣ್ಣಿನಲ್ಲಿ ಹಾಸನ ಜಿಲ್ಲೆಯನ್ನು ಗಮನಿಸಿ ಬಹುತೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
ತರಾಟೆ: ಬೇಲೂರು ತಾಲೂಕಿನಲ್ಲಿ ನಾನು ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರು ತೀವ್ರ ಅಭಾವವಿದ್ದು, ಸ್ಥಳೀಯ ಶಾಸಕ ವೈ.ಎನ್. ರುದ್ರೇಶಗೌಡ ಜನರ ಆಶೋತ್ತರ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಜನರಿಗೆ ತಿಳಿದಿದೆ: ರುದ್ರೇಶಗೌಡ ಪೊಳ್ಳು ಭರವಸೆಯನ್ನು ಕ್ಷೇತ್ರದ ಜನರಿಗೆ ನೀಡುತ್ತಿದ್ದಾರೆ. ಆದರೆ, ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇಲ್ಲದಿದ್ದರೂ, ಜೆಡಿಎಸ್ನ ಕೊಡುಗೆ ಏನು ಎಂದು ಜನರಿಗೆ ತಿಳಿದಿದೆ ಎಂದರು.
ಬೆಂಬಲವಿದೆ: ತಾಲೂಕು ಜೆಡಿಎಸ್ ಉಪಾಧ್ಯಕ್ಷ ಹೆಬ್ಬಾಳು ಭುವನೇಶ್ ಮಾತನಾಡಿ, ಹೆಬ್ಬಾಳು ಪುಟ್ಟ ಗ್ರಾಮ, ಜಿಲ್ಲೆಯಲ್ಲಿ ಮುಖ್ಯ ಗ್ರಾಮವಾಗಲು ಜೆಡಿಎಸ್ನ ಸಾಧನೆ ಅದಮ್ಯವಾಗಿದೆ. ಹೆಬ್ಬಾಳಿಗೆ ಹಾಲು ಶೀಥಲಕೇಂದ್ರ, ಪ್ರೌಢಶಾಲೆ, ಪಶು ಚಿಕಿತ್ಸಾ ಕೇಂದ್ರ, ಪ್ರಮುಖ ರಸ್ತೆ ಹೀಗೆ ಹತ್ತು ಹಲವು ಮೂಲಸೌಲಭ್ಯ ನೀಡಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಅಲ್ಲದೇ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಭಾರೀ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ತೊ.ಚ. ಅನಂತಸುಬ್ಬರಾಯ, ಎಂ.ಎ.ನಾಗರಾಜು, ಜಿ.ಟಿ. ಇಂದಿರಾ, ಸಿ.ಎಸ್.ಪ್ರಕಾಶ್, ಎಚ್.ಪಿ. ಪುಟ್ಟಸ್ವಾಮಿ ಅಪ್ಪಣ್ಣಯ್ಯ, ಪ್ರಸನ್ನಕುಮಾರ್, ವಿಷ್ಣುಕುಮಾರ್, ಜಯಂತಿ ತಗರೆ, ಪದ್ಮಾಕ್ಷಿ, ಸಿ. ಮಲ್ಲೇಶ್, ಜೆ.ಪಿ.ಪ್ರಕಾಶ್, ಮುಳ್ಳೇಗೌಡ ಹಾಗೂ ಇತರರು ಇದ್ದರು.