ಜೆಡಿಎಸ್, ಬಿಜೆಪಿ ಒಳಒಪ್ಪಂದ: ಆರೋಪ
ಬೇಲೂರು: ಹಾಸನ ಲೋಕಸಭಾ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರು ಸುಲಭದಿಂದ ಜಯ ಸಾಧಸಲು, ವಾಮಮಾರ್ಗದಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಓಳ ಒಪ್ಪಂದ ಮಾಡಿಕೊಂಡಿವೆ ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಮಂಗಳವಾರ ರೋಡ್ ಶೋ ನಡೆಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಮೂಲದ ಬಿಜೆಪಿ ಅಭ್ಯರ್ಥಿ ಹಾಸನಕ್ಕೆ ಬರಲು ಪ್ರಮುಖ ಕಾರಣ ದೇವೇಗೌಡರು ಎಂದರು.
ಕಾಂಗ್ರೆಸ್‌ನ ಬಲವನ್ನು ಕುಂದಿಸಲು ಬಿಜೆಪಿ, ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ ಎಂದರು.
ರೋಡ್ ಶೋನಲ್ಲಿ ಶಾಸಕ ವೈ.ಎನ್. ರುದ್ರೇಶಗೌಡ, ಜಿಲ್ಲಾ ಕಾಂಗ್ರೆಸ್ ಮುಖಂಡ ಬಿ. ಶಿವರುದ್ರಪ್ಪ, ಬಿ.ಕೆ. ಚಂದ್ರಕಲಾ, ದಾಮೋದರ್, ಎಚ್.ಕೆ. ಜವರೇಗೌಡ, ಪುರಸಭೆ ಸದಸ್ಯ ಬಿ.ಎಲ್. ಧರ್ಮೇಗೌಡ ಹಾಗೂ ಇತರರು ಇದ್ದರು.
ಅರಸೀಕೆರೆಯಲ್ಲಿ ಬಿಜೆಪಿ ಪರ ಮತಯಾಚನೆ
ಅರಸೀಕೆರೆ: ಪಟ್ಟಣದ ನಾನಾ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿ ಸಿ.ಎಚ್. ವಿಜಯಶಂಕರ್ ಪರವಾಗಿ ಮತಯಾಚಿಸಿದರು.
ಮನವಿ: ಕೇಂದ್ರದ ಯುಪಿಎ ಸರ್ಕಾರದ ವೈಫಲ್ಯ ಹಾಗೂ ಜನವಿರೋಧಿ ಆಡಳಿತವನ್ನು, ಮೋದಿ ನೇತೃತ್ವದಲ್ಲಿ ಗುಜರಾತ್ ಅಭಿವೃದ್ಧಿಗೊಂಡಿರುವ ವಿಷಯದ ಜೊತೆಗೆ ಹೋಲಿಕೆ ಮಾಡಿ ಮಾತನಾಡಿದ ಕಾರ್ಯಕರ್ತರು, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಗುಜರಾತ್ ಅಭಿವೃದ್ಧಿಗೆ ಕಾರಣರಾದ ನರೇಂದ್ರ ಮೋದಿ ಅವರಿಗೆ ದೇಶದ ಆಡಳಿತ ಚುಕ್ಕಾಣಿ ನೀಡಿದಲ್ಲಿ ಭಾರತ ಅಭಿವೃದ್ಧಿಯಾಗಲಿದ್ದು, ಈ ಹಿನ್ನೆಲೆಯಲ್ಲಿ, ಮತದಾರರು ಬಿಜೆಪಿಗೆ ಮತ ಹಾಕಬೇಕು ಎಂದರು. ಪ್ರಚಾರ ಕಾರ್ಯದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಎನ್.ಡಿ. ಪ್ರಸಾದ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಪುರಸಭೆ ಮಾಜಿ ನಾಮಿನಿ ಸದಸ್ಯ ಮುರಳಿಧರ್, ಮುಖಂಡರಾದ ಮಾದಪ್ಪ, ದಿನೇಶ್, ಶ್ರೀಧರ್, ಪ್ರಭಾಕರ, ಪ್ರಜ್ವಲ್ ಕಶ್ಯಪ್, ಸುಭಾಷ್ ಇತರರು ಇದ್ದರು.