'ತೃತೀಯ' ಸರ್ಕಾರದಲ್ಲಿ ಗೌಡರಿಗೆ ಪ್ರಮುಖ ಸ್ಥಾನ
ಆಲೂರು: ಜಿಲ್ಲೆಗೆ ಸಂಪೂರ್ಣ ರಾಜ್ಯದಲ್ಲಿರುವ ಶಿಕ್ಷಣ ಕೇಂದ್ರಗಳನ್ನು ತರುವ ಪ್ರಯತ್ನ ಮಾಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ತೃತೀಯ ರಂಗ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಜೆಡಿಎಸ್ಗೆ ಮತ ನೀಡುವ ಮೂಲಕ ದೇವೇಗೌಡರನ್ನು ಜಯಶೀಲರಾಗಿಸಬೇಕೆಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿದ ಕುಮಾರಸ್ವಾಮಿ, ಗಣಪತಿ ಪೆಂಡಾಲ್ನಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕುಟುಂಬ ರಾಜಕಾರಣವೆನ್ನುವ ಕಾಂಗ್ರೆಸ್ ಆರು ತಲೆಮಾರುಗಳಿಂದ ಕುಟುಂಬ ರಾಜಕಾರಣ ಮಾಡುತ್ತ ಬಂದಿದೆ. ನಾವು ಜನರ ಬಳಿ ದೇವೇಗೌಡರ ಸಾಧನೆಗಳನ್ನು ಮುಂದಿಟ್ಟು ಮತಯಾಚನೆ ಮಾಡುತ್ತೇವೆಂದು ಹೇಳಿದರು.
ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮಾತನಾಡಿ, ಯುವ ಕಾರ್ಯಕರ್ತರ ಪಡೆ ದೊಡ್ಡವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಮನೆಮನೆಗೆ ತೆರಳಿ ಪ್ರಚಾರ ಮಾಡಿ ಮತಯಾಚನೆ ಮಾಡಬೇಕೆಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಮುಖಂಡರಾದ ಜಯರಾಮ್, ರಾಜಪ್ಪಗೌಡ ಹಾಗೂ ಇತರರು ಇದ್ದರು.
ಜನಪರ ಕೆಲಸ ಮುಂದಿಟ್ಟು ಮತ ಯಾಚನೆ: ಭವಾನಿ
ಕಾರ್ಯಕ್ರಮದಲ್ಲಿ ಮಾತನಾಡಿದ ಭವಾನಿ ರೇವಣ್ಣ, ದೇವೇಗೌಡರು ಪ್ರಧಾನಿಯಾಗಿದ್ದ 11 ತಿಂಗಳ ಅವಧಿಯ ಆಡಳಿತ ಕಾಲದ ಸಾಧನೆಗಳು ಹಾಗೂ ಕುಮಾರಣ್ಣ ಸಿಎಂ ಆಗಿದ್ದಾಗ ಮಾಡಿರುವಂತಹ ಜನಪರ ಕಾರ್ಯಗಳನ್ನು ಜನರ ಮುಂದಿಡುತ್ತೇವೆ. ಈ ಬಾರಿ ದೇವೇಗೌಡರನ್ನು ಗೆಲ್ಲಿಸಿದರೆ 11 ತಿಂಗಳು ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ್ದ ಕೆಲಸ ಕಾಮಗಾರಿಗಳಲ್ಲಿ ಅಪೂರ್ಣವಾಗಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ಅವಕಾಶವಿದೆ. ಆದ್ದರಿಂದ ದೇವೇಗೌಡರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದರು.
ಇಂದು ನಗರಸಭೆಯಿಂದ ಮತದಾನ ಜಾಗೃತಿ ಜಾಥಾ
ಹಾಸನ: ಲೋಕಸಭಾ ಸಾರ್ವತ್ರಿಕ ಚುನಾವಣೆ ವ್ಯವಸ್ಥಿತವಾದ ಮತದಾನದ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ (ಸ್ವೀಪ್) ಕಾರ್ಯಕ್ರಮದಡಿ ಹಾಸನ ನಗರದ ಮತದಾರರ ಜನಜಾಗೃತಿ ಮೂಡಿಸಲು ವಿಶೇಷ ಜಾಥಾ ಏರ್ಪಡಿಸಿದೆ.
ಏ.10ರಂದು ಬೆಳಿಗ್ಗೆ 9.30ಕ್ಕೆ ನಗರಸಭಾ ಕಚೇರಿ ಆವರಣದಿಂದ ಹೊರಟು ಹೊಸಲೈನ್ ರಸ್ತೆಯ ಮೂಲಕ ಹಾದು ಹೋಗಿ ಎಸ್ವಿಎಂ ಶಾಲೆ ಆವರಣದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಿ ಅಡ್ಲಿಮನೆ ರಸ್ತೆಯ ಮೂಲಕ ಅಕ್ಷಯ ಭಂಡಾರ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದ ಪ್ರವೇಶದ್ವಾರದಛ ಬಳಿ ಅಂತ್ಯಗೊಳ್ಳುವುದು ಎಂದು ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಏ. 10ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿ ನಗರಸಭಾ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಯವರು ಜಾಥಾ ಉದ್ಘಾಟಿಸುವರು.
ನಗರದ ಹಿರಿಯ ನಾಗರೀಕರು, ನಾಗರೀಕರು, ಕಲಾ ತಂಡಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ ಸಂಘ- ಸಂಸ್ಥೆಯ ಪದಾದಿಕಾರಿಗಳು ಸದರಿ ಜಾಥಾದಲ್ಲಿ ಭಾಗವಹಿಸುವ ಮೂಲಕ ಮತದಾರರ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ನಗರಸಭೆ ಆಯುಕ್ತರು ಕೋರಿದ್ದಾರೆ.