ನೀವೇ ಹಸ್ತ ಆಗಿ, ಅಭಿವೃದ್ಧಿ ಕಾಣಿ
ಕ.ಪ್ರ.ವಾರ್ತೆ ಹೊಳೆನರಸೀಪುರ ಏ. 9
ನೀವೇ ಮಂಜು, ನೀವೇ ಹಸ್ತ ಮತ್ತು ನೀವೇ ಕಾಂಗ್ರೆಸ್ ಆಗಿ ಜಿಲ್ಲೆಯ ಅಭಿವೃದ್ಧಿಯನ್ನು ಕಾಣಿ...
ಇಂಥದ್ದೊಂದು ಹೊಸರೀತಿಯ ಘೋಷವಾಕ್ಯವನ್ನು ಉದ್ಗರಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು. ಅದು, ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ. ಹೀಗೆ, ಥರ ಥರ ಹೊಸ ಥರವಾಗಿ ಮತಯಾಚಿಸಿದ ಮಂಜು, ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ಜನ ಜೆಡಿಎಸ್ ಅನ್ನು ಬೆಂಬಿಲಿಸಿದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಬದಲಾವಣೆ ತನ್ನಿ: ಕಳೆದ 25 ವರ್ಷಗಳಿಂದಲೂ ಜೆಡಿಎಸ್ ಬೆಂಬಲಿಸಿದ್ದರೂ ಕ್ಷೇತ್ರದಲ್ಲಿ ಬದಲಾವಣೆ ಆಗಿಲ್ಲ ಎಂದ ಅವರು, ಅಭಿವೃದ್ಧಿಯಲ್ಲಿ ತಾರತಮ್ಯ ಕಂಡಿದ್ದಾರೆ. ಆದರೆ, ಈ ಬಾರಿ ಮತ್ತೆ ಅದೇ ಆಗಬಾರದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ತನ್ನಿ ಎಂದು ಅವರು ಆಗ್ರಹಿಸಿದರು.
ಕೋರಿಕೆ: ತಾಲೂಕಿನ ಕಸಬಾ ಹೋಬಳಿಯಲ್ಲಿನ ಮೂಡಲಹಿಪ್ಪೆ ಮತ್ತು ಸಿಂಗಾಪುರ ಗ್ರಾಮಗಳಲ್ಲಿ ಮಂಗಳವಾರ ಪಾದಯಾತ್ರೆ ನಡೆಸಿ ಮತಯಾಚಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ತಮಗೆ ಆಶೀರ್ವದಿಸಿ, ಸೇವೆ ಮಾಡಲು, ಕಾಂಗ್ರೆಸ್ ಅಭಿವೃದ್ಧಿಯ ಪರ ಎನ್ನುವುದನ್ನು ಸಾಧಿಸಿ ತೋರಿಸಲು ಅವಕಾಶ ನೀಡಿ ಎಂದು ಎ. ಮಂಜು ಕೋರಿದರು.
ಜಿಲ್ಲೆ ಹಾಗೂ ರಾಜ್ಯದಲ್ಲಿ ದೇವೇಗೌಡರ ಕುಟುಂಬಕ್ಕೆ ಮತದಾರರು ಕಳೆದ ಐದು ದಶಕಗಳಿಂದಲೂ ಆಶೀರ್ವದಿಸಿ ಸಚಿವರು, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಗಳನ್ನು ಏರಲು ಸಹಕರಿಸಿದ್ದಾರೆ. ಆದರೆ ಅಧಿಕಾರ ಸಿಕ್ಕಾಗ ಏನನ್ನೂ ಮಾಡದವರು, ಈಗ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ ಇಲ್ಲದ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಮಂಜು ವಾಗ್ದಾಳಿ ನಡೆಸಿದರು.
ಸಿದ್ಧಾಂತ, ತತ್ವದ ಮೇಲೆ: ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿ ಯೋಜನೆ, ಸಾಲ ಮನ್ನಾ ಮೊದಲಾದ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯದ ಬಡಜನರ ಬದುಕನ್ನು ಹಸನು ಮಾಡಲು ಸಿದ್ದರಾಮಯ್ಯ ಬರಬೇಕಾಯ್ತು. ಆದರೆ, ದಶಕಗಳ ಕಾಲ ಅಧಿಕಾರ ನಡೆಸಿದ ಅಪ್ಪ- ಮಕ್ಕಳು ಈ ಜಿಲ್ಲೆಗೆ ಮಾಡಿರುವ ಶಾಶ್ವತ ಯೋಜನೆಗಳೇನು ಎಂದು ಪ್ರಶ್ನಿಸಿದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರು, ಇವರಂತೆ ಪಕ್ಷ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷ ನಿಂತಿರುವುದು ತನ್ನ ಸಂಘಟನೆ ಹಾಗೂ ಸಹಕಾರದ ತತ್ವದ ಮೇಲೆ ಎಂದು ನುಡಿದರು.
ಕೇಂದ್ರದ ಯೋಜನೆಗಳನ್ನು ತಾವು ಜಾರಿಗೆ ತಂದದ್ದು ಎಂದು ಸುಳ್ಳು ಹೇಳುವ ಜೆಡಿಎಸ್ ನಾಯಕರು, ತಾವು ಜಾರಿಗೆ ತಂದಿರುವ ಶಾಶ್ವತ ಯೋಜನೆಗಳಾವುವು ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಇದಕ್ಕೂ ಮುನ್ನ, ಮೂಡಲಹಿಪ್ಪೆ ಗ್ರಾಮದಲ್ಲಿನ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದ ಮಂಜು, ತಮ್ಮ ಬೆಂಬಲಿಗರೊಂದಿಗೆ ಚನ್ನಕೇಶವ ದೇವಾಲಯಕ್ಕೆ ತೆರಳಿ ಅಭ್ಯರ್ಥಿ ಪೂಜೆ ಸಲ್ಲಿಸಿದರು.
ನಂತರ ಅಗ್ರಹಾರ ಗೇಟ್, ಬಾಗೀವಾಳು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹರೀಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್ ಪಟೇಲ್, ತಾಲೂಕು ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ವಳಂಬಿಗೆ ನಾರಾಯಣ್, ತಾಪಂ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜ್ ಇತರರು ಇದ್ದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿ ಯೋಜನೆ, ಸಾಲ ಮನ್ನಾ ಮೊದಲಾದದ ಯೋಜನೆಗಳಿಂದ ಜನರ ಬದುಕು ಹಸನು ಮಾಡಲು ಸಿದ್ದರಾಮಯ್ಯ ಬರಬೇಕಾಯ್ತು. ಆದರೆ, ದಶಕಗಳ ಕಾಲ ಅಧಿಕಾರ ನಡೆಸಿದ ಅಪ್ಪ- ಮಕ್ಕಳು ಈ ಜಿಲ್ಲೆಗೆ ಮಾಡಿರುವ ಶಾಶ್ವತ ಯೋಜನೆಗಳೇನು?
-ಎ. ಮಂಜು, ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್ ಗೆಲುವು ನಿಶ್ಚಿತ: ಪುಟ್ಟಸ್ವಾಮಿ
ಅರಕಲಗೂಡು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರ ಗೆಲುವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಸಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.
ಪ್ರಚಾರಕ್ಕೆ ಸಿಎಂ: ಏ. 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಳೆನರಸೀಪುರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರಕ್ಕೆ ಆಗಮಿಸುತ್ತಿದ್ದಾರೆಂದು ಅವರು ತಿಳಿಸಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ, ಮಾಜಿ ಸಚಿವ ಇಬ್ರಾಹಿಂ ಮುಂತಾದವರು ಈ ಸಮಾವೇಶದಲ್ಲಿ ಪಾಲ್ಗೊಂಡು ಲೋಕಸಭಾ ಅಭ್ಯರ್ಥಿ ಎ. ಮಂಜು ಪರ ಮತಯಾಚನೆ ಮಾಡುವರು ಎಂದು ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಂಗೇಗೌಡ,ಪುಟ್ಟರಾಜು, ಕೃಷ್ಣ, ಮಂಜೇಗೌಡ ಉಪಸ್ಥಿತರಿದ್ದರು.